ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿದ್ದ 7 ಜನ ಆರೋಪಿಗಳನ್ನ ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಶಾಲ್ (24) ಎಂಬಾತನ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆಗೈದು ಆತನ ಸಾವಿಗೆ ಕಾರಣರಾಗಿದ್ದ ಆರೋಪದಡಿ ಸಾಗರ್, ದಿಲೀಪ್, ಗಂಗಾಧರ್, ವಿಜಯ್, ಮಾದೇಶ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನ ಬಂಧಿಸಲಾಗಿದೆ.
ಡಿಸೆಂಬರ್ 31ರಂದು ರಾತ್ರಿ ಕುಶಾಲ್ ಹಾಗೂ ಆರೋಪಿಗಳು ಭುವನೇಶ್ವರಿ ನಗರದ ಗಾಂಧಿ ಬ್ರಿಡ್ಜ್ ಬಳಿ ಮದ್ಯಪಾನ ಮಾಡಿದ್ದರು. ಆ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಕುಶಾಲ್ ಆರೋಪಿಗಳ ಕೈಯಲ್ಲಿದ್ದ ಬಿಯರ್ ಬಾಟಲ್‌ಗಳನ್ನ ಪದೇ ಪದೇ ಕಿತ್ತುಕೊಳ್ಳುವ ಮೂಲಕ ಕಿರಿಕಿರಿಯುಂಟು ಮಾಡುತ್ತಿದ್ದ.
ಇದರಿಂದ ಸಿಟ್ಟಿಗೆದ್ದ ಆರೋಪಿಗಳು, ಕುಶಾಲ್‌ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ತದನಂತರ ರಕ್ತದ ಮಡುವಿನಲ್ಲಿದ್ದ ಕುಶಾಲ್‌ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಶಾಲ್ ತಾಯಿ ಶಾಂತಮ್ಮ ನೀಡಿದ್ದ ದೂರಿನನ್ವಯ ಕೆ.ಪಿ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಎಂಟು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕುಶಾಲ್ ಮೃತಪಟ್ಟಿದ್ದ. ತನಿಖೆ ನಡೆಸಿದ್ದ ಕೆ.ಪಿ ಅಗ್ರಹಾರ ಠಾಣೆ ಪೊಲೀಸರು, ಸದ್ಯ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ಸಹಿತ ಒಟ್ಟು ಏಳು ಆರೋಪಿಗಳನ್ನ ಬಂಧಿಸಿದ್ದಾರೆ.
PublicNext
10/01/2025 03:21 pm