ಬೆಂಗಳೂರು: ಕಾಂಡಿಮೆಂಟ್ಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನ ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರು (28) ಹಾಗೂ ವಿಶ್ವಾಸ್ (24) ಬಂಧಿತ ಆರೋಪಿಗಳು.
ಕಳೆದ ಬುಧವಾರ ಸಂಜೆ ಸಂಜಯನಗರದ ಭೂಪಸಂದ್ರದಲ್ಲಿರುವ ಶ್ರೀ ಗುರುರಾಘವೇಂದ್ರ ಕಾಂಡಿಮೆಂಟ್ಸ್ ಬಳಿ ಬಂದಿದ್ದ ಆರೋಪಿಗಳು, ಸಿಗರೇಟು ವಿಚಾರವಾಗಿ ಕಾಂಡಿಮೆಂಟ್ಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದರು. ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಾಂಡಿಮೆಂಟ್ಸ್ ಬಳಿ ಬಂದು ಜ್ಯೂಸ್ ಕೇಳಿದ್ದ ಆರೋಪಿಗಳು, ಜೊತೆಗೆ ಸಿಗರೇಟ್ ಕೊಡುವಂತೆ ಅವಾಚ್ಯ ಶಬ್ಧಗಳಿಂದ ಸಿಬ್ಬಂದಿಯನ್ನ ನಿಂದಿಸಿದ್ದರು. 'ಇತರೆ ಗ್ರಾಹಕರ ಮುಂದೆ ಗಲಾಟೆ ಮಾಡಬೇಡಿ, ಸಿಗರೇಟ್ ಬೇಕಿದ್ದರೆ ಹಣ ಕೊಡಿ' ಎಂದು ಕಾಂಡಿಮೆಂಟ್ಸ್ ಸಿಬ್ಬಂದಿ ಕೇಳಿದಾಗ, 'ನಮ್ಮ ಬಳಿಯೇ ಹಣ ಕೇಳುತ್ತೀಯಾ, ನಾವು ಕೇಳಿದಾಗ ಸಿಗರೇಟ್ ಕೊಡದಿದ್ದರೆ ಅಂಗಡಿ ನಡೆಸಲು ಬಿಡುವುದಿಲ್ಲ' ಎಂದು ನಿಂದಿಸುತ್ತ ಹಲ್ಲೆ ಮಾಡಿದ್ದರು.
ಆರೋಪಿಗಳ ಪುಂಡತನ ಕಾಂಡಿಮೆಂಟ್ಸ್ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಕಾಂಡಿಮೆಂಟ್‌ನ ಸಿಬ್ಬಂದಿಯಿಂದ ದೂರು ಪಡೆದ ಸಂಜಯನಗರ ಠಾಣೆ ಪೊಲೀಸರು, ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
PublicNext
10/01/2025 05:17 pm