ಬೆಂಗಳೂರು: ಏಳು ಬೆಟ್ಟದ ಒಡೆಯ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ, ಉತ್ತರದ್ವಾರ ಭಗವಂತನ ದಿವ್ಯದರ್ಶನ, ನಾರಾಯಣನ ನಾಮಸ್ಮರಣೆ.
ಹೌದು. ಇಂದು ಎಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ. ಧರ್ನುರ್ಮಾಸದ ವೈಕುಂಠ ಏಕಾದಶಿಯ ಪ್ರಯುಕ್ತ ನೆಲಮಂಗಲ ನಗರದ ಚನ್ನಪ್ಪ ಬಡಾವಣೆಯ ಶ್ರೀಲಕ್ಷ್ಮೀವೆಂಕಟೇಶ್ವರನಿಗೆ ವಿಶೇಷ ಪೂಜೆ. ದೇವಾಲಯ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ, ಬಾಳೆಕಂದು, ವಿವಿಧ ಪುಷ್ಪಾಲಂಕಾರದಿಂದ ವೆಂಕಟೇಶ್ವರ ದೇವಾಲಯ ಕಂಗೊಳಿಸುತ್ತಿದೆ..
ಮುಂಜಾನೆ 3 ಗಂಟೆಗೆ ವೆಂಕಟೇಶ್ವರನಿಗೆ ಅಭಿಷೇಕ, ಸುಪ್ರಭಾತ ಸೇವೆ ಮತ್ತು ಸಕಲ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಮುಂಜಾನೆ 5 ಗಂಟೆಯಿಂದಲೇ ಸಪ್ತದ್ವಾರ ಮೂಲಕ ಸರತಿ ಸಾಲಿನಲ್ಲಿ ಬಂದ ಸಹಸ್ರಾರು ಭಕ್ತಾಧಿಗಳು ವೆಂಕಟೇಶ್ವರಸ್ವಾಮಿಯ ದರ್ಶನ ಪಡೆಯುತ್ತಿದ್ದು, ದೇವರ ದರ್ಶನದ ಬಳಿಕ ಉತ್ತರದ್ವಾರದ ಮೂಲಕ ಉಯ್ಯಾಲೆಯಲ್ಲಿ ವಿರಾಜಮಾನರಾದ ಶ್ರೀದೇವಿ, ಭೂದೇವಿ ಸಹಿತ ಶ್ರೀವೆಂಕಟೇಶ್ವರ ದರ್ಶನ ಪಡೆದ ಭಕ್ತರು, ಶ್ರೀಮನ್ನಾರಾಯಣನ ನಾಮಸ್ಮರಣೆ ಮಾಡುತ್ತಾ ಪುನೀತರಾದರು.
ಅಲ್ಲದೆ ಮುಂಜಾನೆಯಿಂದ ದೇವರ ದರ್ಶನ ಪಡೆದ ಸಹಸ್ರಾರು ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಲಾಡು ಮತ್ತು ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದು, ನಗರದ ಎಲ್ಲಾ ವಿಷ್ಣು ದೇವಾಲಯಗಳಲ್ಲಿ ಸಹಸ್ರಾರು ಭಕ್ತರ ಹಿಂಡು ಹರಿದು ಬರುತ್ತಿದೆ. ಎಲ್ಲಡೆ ವಿಷ್ಣು ನಾಮಸ್ಮರಣೆಯ ಸಂಭ್ರಮ ಕಳೆಕಟ್ಟಿದೆ.
PublicNext
10/01/2025 01:13 pm