ಚಿತ್ರದುರ್ಗ: ಜಿಲ್ಲೆಯ ಮಾರಿ ಕಣಿವೆ ಬಳಿ ಇರುವ ವಾಣಿವಿಲಾಸ ಸಾಗರ ಜಲಾಶಯ ತುಂಬಿ ಕೋಡಿ ಬೀಳಲು ದಿನಗಣನೆ ಆರಂಭವಾಗಿದೆ. ಜಲಾಶಯದ ಇತಿಹಾಸದಲ್ಲೇ ಕೇವಲ 3ನೇ ಬಾರಿ ಭರ್ತಿಯಾಗುತ್ತಿದೆ ಎಂಬ ಸಂತಸ ಒಂದೆಡೆಯಾದರೆ ಇನ್ನೊಂದೆಡೆ ಹಿನ್ನೀರು ಪ್ರದೇಶದ ಹಳ್ಳಿಗಳು ಹಾಗೂ ಕೃಷಿ ಜಮೀನು ಮುಳುಗಡೆಯಾಗಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಜಲಾಶಯ 135 ಅಡಿ ಗರಿಷ್ಠ ಮಟ್ಟ ಹೊಂದಿದ್ದು, 130 ಅಡಿ ತಲುಪಿದರೆ ಕೋಡಿಯಲ್ಲಿ ನೀರು ಹರಿಯುತ್ತದೆ. ಕಳೆದ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಧಾರಾಕಾರ ಮಳೆ ಸುರಿದ ಕಾರಣ ವೇದಾವತಿ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆಗಳಿಂದ ನಿತ್ಯ 693 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಎತ್ತಿನಹೊಳೆ ಯೋಜನೆ ನೀರು ಪ್ರಾಯೋಗಿಕವಾಗಿ ಅಲ್ಪ ಪ್ರಮಾಣದಲ್ಲಿ ಹರಿದಿದೆ. ಸದ್ಯ ಜಲಾಶಯದ ನೀರಿನ ಮಟ್ಟ 129.90ಕ್ಕೆ ತಲುಪಿದ್ದು ಕೋಡಿ ಬೀಳಲು 0.10 ಅಡಿ ಮಾತ್ರ ಬಾಕಿ ಉಳಿದಿದೆ.
ಜಲಾಶಯ ತುಂಬಿರುವ ಕಾರಣ ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಭಾಗದಲ್ಲಿ ಸಂಭ್ರಮ ಮನೆ ಮಾಡಿದೆ. ಬಾಗಿನ ಅರ್ಪಣೆಗೆ ಸಿದ್ಧತೆಗಳೂ ಆರಂಭಗೊಂಡಿವೆ. ಆದರೆ, ಹೊಸದುರ್ಗ ತಾಲ್ಲೂಕಿನ ಹಿನ್ನೀರು ಪ್ರದೇಶದ ಕೃಷಿ ಜಮೀನು, ರಸ್ತೆ, ಸೇತುವೆಗಳು ನೀರಿನಲ್ಲಿ ಮುಳುಗಿದ್ದು ಸಂತ್ರಸ್ತರು ಕಣ್ಣೀರು ಸುರಿಸುತ್ತಿದ್ದಾರೆ.
Kshetra Samachara
10/01/2025 12:58 pm