ತಿರುಪತಿ: ತಿರುಪತಿ ದೇವಸ್ಥಾನದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಡಿಎಸ್‌ಪಿ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಮತ್ತು ಇತರ ಮೂವರನ್ನು ವರ್ಗಾವಣೆ ಮಾಡಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು ಅವರು ಇಂದು ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಬಳಿಕ ಸಂಜೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಿರುಪತಿಯಲ್ಲಿ ಮೇಲ್ವಿಚಾರಣೆ ವ್ಯವಸ್ಥೆಯಲ್ಲಿ ಕೆಲವು ಲೋಪದೋಷಗಳನ್ನು ನಾನು ನೋಡಿದ್ದೇನೆ. ಬೇಜವಾಬ್ದಾರಿಯಿಂದ ವರ್ತಿಸಿದ ಡಿಎಸ್ಪಿ ರಮಣ ಕುಮಾರ್ ಅವರನ್ನು ಮತ್ತು ಟಿಟಿಡಿ ಗೋಶಾಲಾ ನಿರ್ದೇಶಕ ಹರಿನಾಥ್ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
ಎಸ್ಪಿ ಸುಬ್ಬಾ ರಾಯುಡು, ಟಿಟಿಡಿ ಜೆಇಒ ಗೌತಮಿ ಮತ್ತು ಟಿಟಿಡಿ ಸಿವಿಎಸ್ಒ ಶ್ರೀಧರ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ. ಈ ಕಾಲ್ತುಳಿತ ದುರಾದೃಷ್ಟಕರ ಘಟನೆ. ಇಂತಹ ದುರಂತಗಳನ್ನು ತಪ್ಪಿಸಲು ಕ್ರಮಗಳನ್ನು ಜಾರಿಗೆ ತರಲಾಗುವುದು. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಎಂ ಚಂದ್ರಬಾಬು ನಾಯ್ಡು ಮಾಹಿತಿ ನೀಡಿದ್ದಾರೆ.
PublicNext
10/01/2025 08:30 am