ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಬೈಕ್ ಗೆ ತಡೆರಹಿತ ಬಸ್ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರನ್ನು ಮುಲ್ಕಿ ಅಂಚೆ ಕಚೇರಿಯ ಅಂಚೆಪಾಲಕ ಕೊಲ್ಲೂರು ನಿವಾಸಿ ಪಾಂಡುರಂಗ ರಾವ್ (55) ಎಂದು ಗುರುತಿಸಲಾಗಿದೆ.
ಗಾಯಾಳು ಪಾಂಡುರಂಗ ರಾವ್ ತಮ್ಮ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದಾಗ ಉಡುಪಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಅತಿ ವೇಗದಲ್ಲಿ ಬಂದ ತಡೆರಹಿತ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಂದರ್ಭ ಸವಾರ ಪಾಂಡುರಂಗ ರಾವ್ ರವರ ತಲೆಗೆ, ಕಾಲಿಗೆ ಗಂಭೀರ ಗಾಯಗಳಾಗಿದ್ದು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸರ್ವಿಸ್ ರಸ್ತೆಯಲ್ಲಿ ಅತೀ ವೇಗದಿಂದ ಬಂದ ತಡೆರಹಿತ ಬಸ್ ಸವಾರನ ನಿರ್ಲಕ್ಷ್ಯ ಚಾಲನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಅವೈಜ್ಞಾನಿಕ ಹೆದ್ದಾರಿ ಸರ್ವಿಸ್ ರಸ್ತೆ ಕಾಮಗಾರಿಯಿಂದ ಮುಲ್ಕಿ ಬಸ್ ನಿಲ್ದಾಣ,ಬಪ್ಪನಾಡು ಹಾಗೂ ವಿಜಯ ಸನ್ನಿಧಿ ಜಂಕ್ಷನ್ ಬಳಿ ಅನೇಕ ಅಪಘಾತಗಳು ಸಂಭವಿಸಿದ್ದು ಕೂಡಲೇ ಹೆದ್ದಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕ ಮೋಹನ್ ಕುಬೆವೂರು ಒತ್ತಾಯಿಸಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
PublicNext
09/01/2025 11:05 pm