ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ ಇಲಾಖೆಯ 4 ನೂತನ ಕಟ್ಟಡ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಗರ ಪೊಲೀಸ್ ಇಲಾಖೆಗಾಗಿ ನಿರ್ಮಾಣಗೊಂಡಿರುವ ಪೊಲೀಸ್ ಠಾಣೆ ಹಾಗೂ ವಸತಿಗೃಹ ಸೇರಿ ನಾಲ್ಕು ನೂತನ ಕಟ್ಟಡಗಳನ್ನು ಇಂದು ಉದ್ಘಾಟಿಸಲಾಗಿದೆ. ಸಿಎಂ ಆದಿಯಾಗಿ ಸಚಿವರು, ಶಾಸಕರು ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದಾರೆ‌. ಈ ವೇಳೆ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಕಿವಿಮಾತು ಹೇಳಿದ್ದಾರೆ.

ರಾಜ್ಯ ಪೊಲೀಸ್ ವಸತಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ಚಾಮರಾಜಪೇಟೆ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆ, ಶೇಷಾದ್ರಿಪುರಂ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಹೈಗ್ರೌಂಡ್ಸ್ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸ್ ಠಾಣೆ ಹಾಗೂ ಪುಲಿಕೇಶಿ ನಗರದಲ್ಲಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹದ ಕಟ್ಟಡಗಳನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ‌

ಸಿಎಂಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ ಜಿ. ಪರಮೇಶ್ವರ, ಕೆ.ಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದ್ರು

ಇನ್ನೂ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಪರಾಧಿಗಳಲ್ಲಿ ಭಯದ ವಾತಾವರಣ, ಜನ ಸಾಮಾನ್ಯರಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಿ ಎಂದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿವಿಮಾತು ಹೇಳಿದ್ದಾರೆ. ರಾಜ್ಯದ ಜನಸಂಖ್ಯೆ 7 ಕೋಟಿ ದಾಟುತ್ತಿದೆ. ಜನರ ಆಸ್ತಿಪಾಸ್ತಿ, ಮಾನ ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಇದಕ್ಕಾಗಿ ಪೊಲೀಸ್ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನ ಒದಗಿಸಲು ಸರ್ಕಾರ ಸದಾ ಸಿದ್ಧವಿದೆ.

ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಿರುವುದು ನೆಮ್ಮದಿಯ ಸಂಗತಿ. ಆದರೆ, ಪೊಲೀಸರು ಚಾಪೆ ಕೆಳಗೆ ತೂರಿದರೆ ಅಪರಾಧಿಗಳು ರಂಗೋಲಿ ಕೆಳಗೆ ತೂರಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಅವಕಾಶ ಸಿಗಬಾರದು. ಜನರಿಗೆ ಉದ್ಯೋಗ ಇಲ್ಲದಿರುವುದು, ಬದುಕಿಗೆ ಅವಕಾಶ ಇಲ್ಲದಿರುವಾಗ ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಾರೆ. ಶಾಂತಿ ಸುವ್ಯವಸ್ಥೆಯಿದ್ದಾಗ ಆ ರಾಜ್ಯದ ಅಭಿವೃದ್ಧಿಯ ವೇಗವೂ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ, ಠಾಣೆಗಳಿಗೆ ಬರುವವರನ್ನ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದರು.

ಪೊಲೀಸರು ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್‌ ಮಾಫಿಯಾ ಜೊತೆ ಕೈ ಜೋಡಿಸಬಾರದು. ಅಂಥ ಕೆಲಸ ಮಾಡಿದರೆ ಸರ್ಕಾರ ಸಹಿಸುವುದಿಲ್ಲ. ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗಳು , ಎಸ್ಐಗಳು, ಇನ್ಸ್‌ಪೆಕ್ಟರ್ಸ್ ಮೇಲೆ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ. ಅವರ ಯೋಗಕ್ಷೇಮ ಕೂಡ ನಮ್ಮ ಜವಾಬ್ದಾರಿ. ಪೊಲೀಸ್ ಸಿಬ್ಬಂದಿಯ ಗೃಹ ಯೋಜನೆಯನ್ನು ಸರ್ಕಾರ ಮುಂದುವರೆಸುತ್ತದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಹೊಸ ಕಟ್ಟಡಗಳ ಉದ್ಘಾಟನೆ ಜೊತೆಗೆ ಸಿಎಂ ಸಾಹೇಬರು ಪೊಲೀಸರಿಗೆ ಕಿವಿಮಾತು ಹೇಳಿದ್ದು, ಮುಂದಿನ ದಿನಮಾನಗಳಲ್ಲಿ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Edited By : Suman K
PublicNext

PublicNext

08/01/2025 06:53 pm

Cinque Terre

33.58 K

Cinque Terre

0

ಸಂಬಂಧಿತ ಸುದ್ದಿ