ಚಿಕ್ಕಮಗಳೂರು: ಬಲಾಡ್ಯ ಜಾತಿಗಳಲ್ಲಿ ಜನಿಸಿದರೆ ಮಾತ್ರ ಸ್ವರ್ಗ ದೊರಕದು. ಪರೋಪಕಾರಿ ಗುಣ ಇರುವವರಿಗೆ ಪುಣ್ಯ, ಪರಪಿಡುಕನಿಗೆ ನರಕ ಎಂಬುದು ಸನಾತನ ಧರ್ಮದಲ್ಲಿದೆ. ಸನ್ನಡತೆ, ಸದ್ವಿಚಾರಗಳಿಂದ ಕೂಡಿರುವ ಮನುಷ್ಯ ದೊಡ್ಡ ವ್ಯಕ್ತಿಯಾಗಲು ಸಾಧ್ಯ, ಜಾತಿಗಳಿಂದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಸವಿತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ಧ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನ ಆತ್ಮದಲ್ಲಿ ದೇವರು ನೆಲೆಸಿರುತ್ತಾನೆ. ನಮ್ಮೊಳಗೆ ಎಂದಿಗೂ ಕೀಳರಿಮೆ ಇರ ಕೂಡದು. ಒಂದು ಕಾಲದಲ್ಲಿ ರಾಜಮಹಾರಾಜರಿಗೆ ದೊರಕದ ದೇವರ ದರ್ಶನ, ಬೇಡರ ಕಣ್ಣಪ ಭಕ್ತಿಗೆ ಒಲಿದು ಪರಮಶಿವ ಪ್ರತ್ಯಕ್ಷನಾದನು. ಶ್ರೀ ರಾಮನು ಶಬರಿ ಭಕ್ತಿಗೆ ಮೆಚ್ಚಿ ಎಂಜಲು ತಿಂದರೆ ಹೊರತು ಜಾತಿಯಿಂದಲ್ಲ ಎನ್ನುವ ಸತ್ಯ ಅರಿಯಬೇಕು ಎಂದು ತಿಳಿಸಿದರು. ಜಗದ ಒಳಿತಿಗಾಗಿ ಶ್ರಮಿಸಿದ ಸವಿತಾ ಮಹರ್ಷಿ ಗುರುಗಳು, ಬಿ.ಆರ್.ಅಂಬೇಡ್ಕರ್, ವಿವೇಕಾನಂದರು ಉತ್ತಮ ವಿಚಾರಧಾರೆಗಳಿಂದ ಇಂದಿಗೂ ನೆನೆಸುವಂಥ ಕೆಲಸ ಮಾಡಲಾಗುತ್ತಿದೆ ಹೊರತು ಅಧಿಕಾರ ಅಥವಾ ಅಂತಸ್ತಿನಿಂದಲ್ಲ.
ಮನುಷ್ಯನು ಅರ್ಜಿ ಸಲ್ಲಿಸಿ ಜನಿಸಲು ಸಾಧ್ಯವಿಲ್ಲ. ಹುಟ್ಟಿದ ನಂತರ ಬೆಳವಣಿಗೆಯತ್ತ ಸಾಗಬೇಕು ಹೊರತು ಜಾತಿಯಿಂದ ಗುರುತಿಸಬಾರದು ಎಂದರು.
ಅನಾದಿಕಾಲದಲ್ಲಿ ಋಷಿಮುನಿಗಳ ಮುಂದೆ ರಾಜರು ತಲೆಬಾಗುತ್ತಿದ್ದರು. ಇಂದು ಮನುಷ್ಯ ಬದುಕಿನಲ್ಲಿ ಸುಂದರವಾಗಿ ಕಾಣಲು ಕ್ಷೌರಿಕ ಅಂಗಡಿಗಳಲ್ಲಿ ತಲೆಬಾಗುತ್ತಾನೆ. ಸಮಾಜದಲ್ಲಿ ಪ್ರತಿಯೊಂದು ಜನಾಂಗಕ್ಕೂ ಬದುಕುವ ಹಕ್ಕಿದೆ. ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಆ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನದಡಿ ನಾವುಗಳು ಒಂದು ಎಂಬುದು ಸಾಬೀತುಪಡಿಸಬೇಕು ಎಂದರು.
Kshetra Samachara
07/01/2025 08:47 pm