ಬೆಂಗಳೂರು: ಗಂಡ,ಹೆಂಡತಿ ಜೊತೆಗೆ ಇಬ್ಬರು ಮುದ್ದಾದ ಮಕ್ಕಳ ಚಂದದ ಕುಟುಂಬ. ಅದೇನಾಯ್ತೋ ಏನೋ,ಇಂದು ಬೆಳಿಗ್ಗೆ ನಾಲ್ಕೂ ಜನರು ಹೆಣವಾಗಿದ್ದರು. ಇಬ್ಬರು ಮಕ್ಕಳಿಗೆ ವಿಷ ಕೊಟ್ಟು,ತಾವೂ ನೇಣಿಗೆ ಶರಣಾದ ದುರಂತ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
ಈ ದೃಶ್ಯದಲ್ಲಿ ಕಾಣ್ತಿರುವ ಮನೆ ಸದಾಶಿವನಗರದಲ್ಲಿರುವ ಮನೆ.ಈ ಮನೆಯಲ್ಲಿ ಉತ್ತರಪ್ರದೇಶ ಮೂಲದ ನಾಲ್ಕು ಜನರ ಒಂದು ಕುಟುಂಬ ವಾಸ ಮಾಡ್ತಿತ್ತು. ಈ ಮನೆಗೆ ಮೂರು ಜನ ಮನೆ ಕೆಲಸದವರು ಅಂದ ಮೇಲೆ ಕೊಂಚ ಮಟ್ಟಿಗೆ ಸ್ಥಿತಿವಂತ ಕುಟುಂಬವೇ. ಎಂದಿನಂತೆ ಇಂದೂ ಕೂಡ ಮನೆ ಕೆಲಸದವರು ಮನೆ ಕೆಲಸಕ್ಕೆಂದು ಮನೆ ಬಳಿ ಬಂದಾಗ ಬಾಗಿಲು ತೆರೆದೇ ಇತ್ತು.ಮನೆ ಒಳಗೆ ಹೋದ ಮನೆ ಕೆಲಸದವರಿಗೆ ಶಾಕ್ ಕಾದಿತ್ತು.
ಹೌದು,ಮನೆ ಕೆಲಸದವರು ಮನೆ ಒಳಗೆ ಹೋಗ್ತಿದ್ದಂತೆ ಕಂಡಿದ್ದು ಭಯಾನಕ ದೃಶ್ಯ.ಮನೆಯಲ್ಲಿ ವಾಸವಿದ್ದ ಅನೂಪ್ ಕುಮಾರ್ ಹಾಗೂ ಆತನ ಪತ್ನಿ ರಾಖಿ ನೇಣಿಗೆ ಶರಣಾಗಿದ್ದರು.ಸ್ವಲ್ಪ ಮುಂದುವರೆದರೆ ಮೇಲ್ಮಹಡಿಯ ಬೆಡ್ ಮೇಲೆ ಎರಡು ಮುದ್ದಾದ ಮಕ್ಕಳು ಶವವಾಗಿದ್ದರು.ಅಂದ್ಹಾಗೆ ನಿನ್ನೆಯ ದಿನ ಸಂಜೆ ಮನೆಕೆಲಸದವರು ಹಾಗೂ ಮನೆಯ ಮಾಲೀಕರೊಂದಿಗೆ ಸಹಜವಾಗಿ ಮಾತನಾಡಿದ್ದ ಅನೂಪ್ ಕುಮಾರ್ ಹಾಗೂ ರಾಖಿ ತಡರಾತ್ರಿ 12 ಗಂಟೆಯ ನಂತರ ಮಕ್ಕಳಾದ 5 ವರ್ಷದ ಅನುಪ್ರಿಯಾ ಹಾಗೂ 2 ವರ್ಷದ ಪ್ರಿಯಾನ್ಸ್ ಗೆ ವಿಷವುಣಿಸಿ,ತಾವೂ ನೇಣಿಗೆ ಶರಣಾಗಿದ್ದರೆಂದು ಹೇಳಲಾಗ್ತಿದ್ದು, ಮನೆ ಕೆಲಸದವರು ಕರೆ ಮಾಡ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಬೈಟ್ - ಶೇಖರ್ ಹೆಚ್ ಟಿ , ಡಿಸಿಪಿ ಕೇಂದ್ರ ವಿಭಾಗ
ಇನ್ನು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡ್ತಿದ್ದ ಅನೂಪ್ ಕುಮಾರ್,ಸಂಸ್ಥೆಯ ಮಾಲೀಕರೇ ನೀಡಿದ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ವಾಸವಿದ್ದು ತಿಂಗಳಿಗೆ ಇಪ್ಪತ್ತು ಸಾವಿರ ಬಾಡಿಗೆ ಕಟ್ತಿದ್ದರಂತೆ.ಕಳೆದ ಒಂದೂವರೆ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಅನೂಪ್ ಕುಮಾರ್ ಪುಣೆಯಲ್ಲಿ ಹೋಗಿ ಸೆಟಲ್ ಆಗುವ ಪ್ಲ್ಯಾನ್ ಮಾಡಿದ್ದರಂತೆ. ಇಬ್ಬರು ಮಕ್ಕಳಲ್ಲಿ ಮಗಳಾದ 5 ವರ್ಷದ ಅನುಪ್ರಿಯಾ ಸ್ವಲ್ಪ ವಿಶೇಷ ಚೇತನರಾಗಿದ್ದು, ಮಗಳ ಟ್ರೀಟ್ಮೆಂಟ್ ಮತ್ತು ಸ್ಕೂಲ್ ವಿಷಯವಾಗಿ ಸಹಕಾರಿಯಾಗುತ್ತದೆಂದು, ಪುಣೆಯಲ್ಲಿ ನೆಲೆಸುವ ಪ್ಲ್ಯಾನ್ ಮಾಡಿದ್ದರಂತೆ.ಇನ್ನು ಕೆಲ ಹಣಕಾಸಿನ ವಿಚಾರಕ್ಕೆ ಇತ್ತೀಚೆಗೆ ಸ್ವಲ್ಪ ನೊಂದಿದ್ರು ಎಂದು ಮನೆ ಮಾಲೀಕರು ಹೇಳ್ತಿದ್ದಾರೆ.
ಇನ್ನೂ ಸಾಯುವುದಕ್ಕೂ ಮುನ್ನ ಮನೆಯಲ್ಲಿನ ಟಿವಿ ಮೇಲೆ ಕುಟುಂಬಸ್ಥರ ಕಾಂಟ್ಯಾಕ್ಟ್ ನಂಬರ್ ಅಂಟಿಸಿದ್ದು,ಇನ್ನು ಸಾವಿಗೆ ಕಾರಣಗಳನ್ನ ಉಲ್ಲೇಖಿಸಿ ಮೃತ ಅನೂಪ್ ಕುಮಾರ್ ಉತ್ತರಪ್ರದೇಶದಲ್ಲಿರುವ ತಮ್ಮನಿಗೆ ಮೇಲ್ ಮಾಡಿದ್ದರಂತೆ.ಈ ಮಾಹಿತಿಯನ್ನ ಕಲೆ ಹಾಕಿ ಸಾವಿನ ಕಾರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.ಇನ್ನೂ ಪೊಲೀಸರ ತನಿಖೆಯ ಬಳಿಕವೇ ಇಡೀ ಕುಟುಂಬದ ದುರಂತ ಅಂತ್ಯಕ್ಕೆ ನಿಖರ ಕಾರಣಗಳು ಹೊರಬರಬೇಕಿದೆ.
PublicNext
06/01/2025 07:00 pm