ಆನೇಕಲ್: ಅಕ್ಕಿ ಗೋಧಿ ರಾಗಿ ಹೀಗೆ ಅನೇಕ ಆಹಾರ ಪದಾರ್ಥಗಳನ್ನು( ಕೋಲ್ಡ್ ಸ್ಟೋರೇಜ್) ಉಗ್ರಾಣದಲ್ಲಿಟ್ಟು ಸಮಯಕ್ಕೆ ಸರಿಯಾಗಿ ಜನರಿಗೆ ವಿತರಣೆ ಮಾಡಲು ಉಗ್ರಾಣಗಳನ್ನು ಮಾಡಲಾಗುತ್ತಿದೆ. ಹಾಗಾಗಿ ಸರ್ಕಾರ 800 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಅದಲ್ಲದೆ, ಟೆಂಡರ್ ತೆಗೆದುಕೊಂಡು ಮಾಲೀಕರು ಅದನ್ನ ಕಟ್ಟಿ ಸರ್ಕಾರಕ್ಕೆ ನೀಡಲಾಗುತ್ತಿದೆ.
ಆದರೆ, ಅದರಲ್ಲಿ ನಡೆಯುವ ಕಾಮಗಾರಿ ನೋಡಿದ್ರೆ ನಿಜಕ್ಕೂ ಶೋಚನೀಯ. ಅಧಿಕಾರಿಗಳಿಲ್ಲ, ಇಂಜಿನಿಯರ್ ಗಳಿಲ್ಲ! ಗುಣಮಟ್ಟದ ಕೆಲಸ ನಡೀತಿಲ್ಲ. ಇಂಥದೊಂದು ಘಟನೆಗೆ ಸಾಕ್ಷಿಯಾಗಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಮಕೃಷ್ಣಪುರದಲ್ಲಿ ಗೋಡೌನ್.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಮಕೃಷ್ಣಪುರ ಸಮೀಪ ಕರ್ನಾಟಕ ಸರ್ಕಾರ ಕೆಲ ವರ್ಷಗಳ ಹಿಂದೆ ಸ್ಟೇಟ್ ವೇರ್ ಹೌಸ್ ( ಎಸ್ ಡಬ್ಲ್ಯೂ ಸಿ) ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ನ್ನು ಸೋಮು ಕಂಪನಿಗೆ ಟೆಂಡರ್ ಮೂಲಕ ಮಂಜೂರು ಮಾಡಲಾಗಿತ್ತು. ಕೊರೋನಾ ಸಂದರ್ಭದಲ್ಲಿ ನನೆಗುದಿಗೆ ಬಿದ್ದಿತ್ತು. ಆದರೆ, ಸೋಮು ಕಂಪನಿಯಿಂದ ಮಂಡ್ಯ ಮೂಲದ ಗಂಗಾವರಿ ಕಂಪನಿಗೆ ಕಮಿಷನ್ ಮೂಲಕ ಹೊರಗುತ್ತಿಗೆಯನ್ನು ಮಾರಾಟ ಮಾಡಲಾಗಿತ್ತು. ಆದರೀಗ 4 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನು ತೆಗೆದುಕೊಂಡಿದೆ.
ತುಕ್ಕು ಹಿಡಿದ ಕಬ್ಬಿಣ ಸಲಕರಣೆಗಳನ್ನು ಮತ್ತು ಕಳಪೆ ಪೇಂಟಿಂಗ್ ಬಳಕೆ ಮಾಡಿ ನಿರ್ಮಾಣ ಮಾಡಲಾಗುತ್ತಿದೆ. ಹೊರ ರಾಜ್ಯಗಳಿಂದ ಬಂದ ಕಾರ್ಮಿಕರು ಯಾವುದೇ ಸೂಕ್ತ ರಕ್ಷಣೆ ಇಲ್ಲದೆ ಕೆಲಸವನ್ನು ಮಾಡುತ್ತಿದ್ದಾರೆ. ಅದಲ್ಲದೆ, ಕೆಲಸ ಮಾಡುವ ಜಾಗದಲ್ಲಿ ಕಾರ್ಮಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸುತ್ತಿದೆ. ಇನ್ನು ಕೆಲಸ ಮಾಡುವ ಜಾಗದಲ್ಲಿ ಈ ಹಿಂದೆ ಓರ್ವ ಮೃತ ಪಟ್ಟು, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಈ ಪ್ರಕರಣವನ್ನು ಅಲ್ಲಿಗೇ ಮುಚ್ಚಿ ಹಾಕಲಾಗಿತ್ತು.
ಇನ್ನು ಈ ಕಾಮಗಾರಿಯಲ್ಲಿ ಬಾರಿ ಗೋಲ್ಮಾಲ್ ಆಗಿದ್ದ ಕಾರಣಕ್ಕೆ ಇಂಜಿನಿಯರ್ ರನ್ನು ಕೆಲಸದಿಂದ ಕಿತ್ತಾಕಲಾಗಿತ್ತು. ಇದೇ ಜಾಗದಲ್ಲಿ 85 ಕಿಟಕಿಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ ಅಂತ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉನ್ನತ ಮೂಲಗಳಿಂದ ಈ ಮಾಹಿತಿ ತಿಳಿದು ಬಂದಿದೆ. ಇನ್ನು, ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಕೃಷ್ಣಪುರ ಸದಸ್ಯ ರವಿ ಮಾತನಾಡಿ, ಸರ್ಕಾರದ ಕಣ್ಣಿಗೆ ಮಣ್ಣೆರಚುವ ಕೆಲಸಗಳನ್ನು ಕಂಟ್ರಾಕ್ಟರ್ ಮಾಡ್ತಿದ್ದಾರೆ. 4 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕೆಲಸ ಶುರು ಮಾಡಿದ್ದಾರೆ. ಆದರೆ, ಎಲ್ಲಾ ಕಳಪೆ ಕಾಮಗಾರಿ. ತುಕ್ಕು ಹಿಡಿದ ಕಂಬಿಗಳಿಗೆ ಎಕ್ಸ್‌ಪೈರಿ ಆಗಿರುವ ಪೇಂಟಿಂಗ್ ಮಾಡಿ ಗೋಡೌನ್ ನಿರ್ಮಾಣ ಮಾಡುತ್ತಿದ್ದಾರೆ.
PublicNext
05/01/2025 08:26 pm