ತುಮಕೂರು: ಹಾಲಿನ ವಾಹನದಲ್ಲಿ ಕೇಳಿಬರುತ್ತಿದ್ದ ಅಂಬೇಡ್ಕರ್ ಅವರ ಜೈ ಭೀಮ್ ಹಾಡು ಕೇಳಿ ಆಕ್ರೋಶಗೊಂಡು ವಾಹನ ತಡೆದು ಈ ಹಾಡು ಹಾಕದಂತೆ ವಾಹನದಲ್ಲಿದ್ದ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಜೊತೆಗೆ ಮರ್ಮಾಂಗಕ್ಕೆ ಗಂಭೀರವಾಗಿ ಹೊಡೆದು ಜಾತಿ ನಿಂದನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುದ್ದನಹಳ್ಳಿ ಗ್ರಾಮದ ಗೊಲ್ಲ ಸಮುದಾಯದ ರೈಲ್ವೆ ಇಲಾಖೆ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಮತ್ತು ಮತ್ತೊಬ್ಬ ವ್ಯಕ್ತಿ ನರಸಿಂಹರಾಜು ಎಂಬಾತರು ಜಾತಿ ನಿಂದನೆ ಮಾಡಿ ದಲಿತ ಯುವಕನ ಮರ್ಮಾಂಗಕ್ಕೆ ಗಂಭೀರವಾಗಿ ಹಲ್ಲೆ ಮಾಡಿರುವ ವ್ಯಕ್ತಿಗಳು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಹಲ್ಲೆಗೊಳಗಾದ 19 ವರ್ಷದ ದೀಪು ಹಾಗೂ ನರಸಿಂಹ ಮೂರ್ತಿ ಶನಿವಾರ ಸಂಜೆ ಎಂದಿನಂತೆ ಹಾಲಿನ ವಾಹನ ಚಾಲನೆ ಮಾಡಿಕೊಂಡು ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಅವರಿಗೆ ಇಷ್ಟವಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗೆಗಿನ ಜೈ ಭೀಮ್ ಹಾಡು ಹಾಕಿಕೊಂಡು ಬರುತ್ತಿದ್ದರು. ಆಗ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ನೀವು ಯಾವ ಜಾತಿಯವರು ಎಂದು ಜಾತಿ ಹೆಸರಿಸಿ ಅವಾಚ್ಯ ಶಬ್ದಗಳಿಂದ ಬೈದು ಜೊತೆಗೆ ಈ ಹಾಡು ಎಲ್ಲಿಯೂ ಹಾಕದಂತೆ ತಾಕೀತು ಮಾಡಿದ್ದಾರೆ. ವಾಹನದಲ್ಲಿದ್ದ ಇಬ್ಬರನ್ನು ಎಳೆದಾಡಿ ಹಲ್ಲೆ ಮಾಡಿ ದೀಪು ಎಂಬ ಯುವಕನ ಮರ್ಮಾಂಗಕ್ಕೆ ಗಂಭೀರ ಸ್ವರೂಪದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ದಲಿತ ಯುವಕರು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Kshetra Samachara
05/01/2025 07:33 pm