ಮಂಗಳೂರು: ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಇತ್ತೀಚೆಗೆ ತುಳುನಾಡಿನ ಹಿರಿಮೆಯನ್ನು ಸಾರುವ ಸಾಹಿತ್ಯವಿರುವ ಹಾಡು ಹಾಡುವ ಮೂಲಕ ಕರಾವಳಿಯ ತುಳುವರ ಮನ ಗೆದ್ದಿದ್ದರು. ಇದೀಗ ಕರಾವಳಿ ಉತ್ಸವದ ಅಂಗವಾಗಿ ಕದ್ರಿಯ ಜಿಂಕೆಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ 'ಯುವ ಮನ' ವೇದಿಕೆಯೇರಿ ಮತ್ತೆ ಹಾಡು ಹಾಡಿ ಮೋಡಿ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರು ಹಾಡಿರುವ ತುಳು ಹಾಗೂ ಹಿಂದಿ ಹಾಡುಗಳು ವೈರಲ್ ಆಗಿದ್ದು, ಕರಾವಳಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಅವರು ಹಾಡುತ್ತಿರುವಾಗ ಪ್ರೇಕ್ಷಕರು ಕೇಕೆ, ಚಪ್ಪಾಳೆ ಹೊಡೆದು ಇನ್ನಷ್ಟು ಹುರಿದುಂಬಿಸುತ್ತಿರುವುದು ಕೇಳಿಬರುತ್ತಿದೆ. ಇದರಿಂದ ಉತ್ತೇಜಿತರಾದ ಡಿಸಿಯವರು ಸಣ್ಣಗೆ ನೃತ್ಯ ಮಾಡುತ್ತಾ ಹಾಡಿರುವುದು ಇನ್ನಷ್ಟು ಕ್ರೇಜಿ ಎನಿಸಿದೆ. ಸದಾ ಜಿಲ್ಲೆಯ ಕೆಲಸದಲ್ಲಿ ಬ್ಯುಸಿ ಆಗಿರುವ ಡಿಸಿ ಈ ಮೂಲಕ ಸ್ವಲ್ಪ ರಿಲ್ಯಾಕ್ಸ್ ಮೂಡಿಗೆ ಹೋದಂತೆ ಭಾಸವಾಗಿದೆ.
ಮೂಲತಃ ತಮಿಳುನಾಡು ರಾಜ್ಯದವರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಸದ್ಯ ಮಂಗಳೂರಿನಲ್ಲಿ ಡಿಸಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತುಳುನಾಡಿನ ಬಗ್ಗೆ ಅಪಾರ ಗೌರವ ಹೊಂದಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತುಳುನಾಡಿನ ಬಗ್ಗೆ ಸಾಹಿತ್ಯವಿರುವ ಹಾಡು ಹಾಡಿರುವುದರಿಂದ ತುಳುನಾಡಿಗರು ಫುಲ್ ಖುಷ್ ಆಗಿದ್ದಾರೆ. ಸದ್ಯ ಅವರ ಹಾಡಿನ ವೀಡಿಯೋ ವೈರಲ್ ಆಗಿದೆ.
PublicNext
05/01/2025 12:28 pm