ಮಂಗಳೂರು: ಮನಪಾ ಆಯುಕ್ತ ಆನಂದ ಎಲ್.ಸಿ. ವಿರುದ್ಧ ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಅವರು ಸಾಮಾನ್ಯ ಸಭೆಯಲ್ಲಿಯೇ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದು, ಇದಕ್ಕೆ ಇಡೀ ಸದನ ಯಾವುದೇ ವಿರೋಧವಿಲ್ಲದೆ ಮೌನವಾಗಿ ಸಹಮತ ವ್ಯಕ್ತಪಡಿಸಿದ ಅಪರೂಪದ ಪ್ರಸಂಗಕ್ಕೆ ಮಂಗಳೂರು ಮನಪಾ ಸಾಕ್ಷಿಯಾಯಿತು.
ಸಾಮಾನ್ಯ ಸಭೆಯ ಆರಂಭದಲ್ಲಿ ನಗರಕ್ಕೆ ಕಲುಷಿತಗೊಂಡಿರುವ ಕುಡಿಯುವ ನೀರು ಸರಬರಾಜು ಬಗ್ಗೆ ಚರ್ಚೆ ನಡೆಯಿತು. ಈ ವಿಚಾರವನ್ನು ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಕೈಗೆತ್ತಿಕೊಂಡು, ದಾಖಲೆಗಳನ್ನು ತೋರಿಸಿ ನೇರವಾಗಿ ಸಾಲುಸಾಲು ಆರೋಪಗಳನ್ನು ಮಾಡಿದರು. ಇದರಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಮನಪಾ ಆಯುಕ್ತರನ್ನು ಉಲ್ಲೇಖಿಸಿ ಗಂಭೀರ ಆರೋಪ ಮಾಡಿದರು. ಒಂದು ಹಂತದಲ್ಲಿ ಆಯುಕ್ತರು ಸ್ಪಷ್ಟನೆ ಕೊಡಲು ಮುಂದಾದರೂ ಮೇಯರ್ ಅವರನ್ನು ತಡೆದು, ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಅವರಿಗೆ ಮಾತನಾಡಲು ಅವಕಾಶ ನೀಡಿ ಪರೋಕ್ಷವಾಗಿ ತಮ್ಮ ಸಹಮತವನ್ನು ಸೂಚಿಸಿದರು.
20ವರ್ಷಗಳ ಹಿಂದೆ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಕಾನೂನಾತ್ಮಕವಾಗಿ ಕಟ್ಟಿಲ್ಲವೆಂದು ಈ ಹಿಂದಿನ ಯಾವ ಆಯುಕ್ತರೂ ಕಂಪ್ಲಿಷನ್ ಸರ್ಟಿಫಿಕೇಟ್ ಕೊಟ್ಟಿರಲಿಲ್ಲ. ಆದರೆ ಆನಂದ ಎಲ್.ಸಿ. ಅವರು ಬಂದ ತಕ್ಷಣ ಅದಕ್ಕೆ ಕಂಪ್ಲಿಷನ್ ಸರ್ಟಿಫಿಕೇಟ್ ನೀಡಿದ್ದಾರೆ. ಈ ಕಾಮಗಾರಿಯಲ್ಲಿ ಮನಪಾ ಸ್ಥಾಯಿ ಸಮಿತಿಯಲ್ಲರುವುದೇ 60ಕೋಟಿ ರೂ. ಹಣ. ಆದರೆ 164ಕೋಟಿ ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ ಭ್ರಷ್ಟಾಚಾರದ ವಾಸನೆಯಿದೆ ಎಂದು ಗಂಭೀರ ಆರೋಪ ಮಾಡಿದರು.
ಇಬ್ಬರು ಜೆಇ ಹಾಗೂ ಇಬ್ಬರು ಎಇಇಯ ಇಬ್ಬರು ಅಧಿಕಾರಿಗಳಿಗೆ ಹುದ್ದೆಗೆ ನೇಮಕವಾದ 29ದಿನ ಅಧಿಕಾರ ನೀಡಿರಲಿಲ್ಲ. 30ವರ್ಷಗಳ ಅನುಭವವಿರುವ ಜೆಇ ಮತ್ತು ಎಇಇಗಳನ್ನು ಬಿಟ್ಟು ಡೆಪ್ಯುಟೇಷನ್‌ಗೆ ಬಂದವರಿಗೆ ಸೀನಿಯರ್ ಇಂಜಿನಿಯರ್ ಚಾರ್ಜ್ ಕೊಟ್ಟಿದ್ದಾರೆ. ಇದರ ಹಿಂದೆಯೂ ಭ್ರಷ್ಟಾಚಾರ ಅಡಗಿದೆ ಎಂದು ಆರೋಪಿಸಿದರು.
ಇದಕ್ಕೆ ಆಯುಕ್ತ ಆನಂದ ಎಲ್.ಸಿ. ಅವರು ಸ್ಪಷ್ಟನೆ ನೀಡಿದರು. ಆದರೆ ಇದನ್ನು ತನಿಖೆ ನಡೆಸಬೇಕೆಂದು ಸರಕಾರಕ್ಕೆ ಪತ್ರ ಬರೆಯಬೇಕೆಂದು ಅಬ್ದುಲ್ ರವೂಫ್ ಮೇಯರ್ ಅವರನ್ನು ಒತ್ತಾಯಿಸಿದರು. ಸದನದಲ್ಲಿಯೇ ಇಂತಹ ಗಂಭೀರ ಆರೋಪ ಬಂದಿರುವುದರಿಂದ ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಮೇಯರ್ ಆದೇಶಿಸಿದರು.
ಇಡೀ ಸದನದಲ್ಲಿ ಈ ಆರೋಪಕ್ಕೆ ಚಕಾರವೆತ್ತದೆ ಮನಪಾ ಸದಸ್ಯರೆಲ್ಲರೂ ಈ ವಿಚಾರದಲ್ಲಿ ಒಗ್ಗಟ್ಟಿನಲ್ಲಿದೆ ಎಂಬಂತೆ ಭಾಸವಾಗಿದೆ. ಸದನದಲ್ಲಿಯೇ ಓರ್ವ ಆಯುಕ್ತರ ವಿರುದ್ಧ ಇಷ್ಟೊಂದು ಮಟ್ಟದ ಗಂಭೀರ ಆರೋಪ ಬಂದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎನ್ನಬಹುದು.
Kshetra Samachara
04/01/2025 09:25 pm