ಮಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ, ಅವರ ರಾಜಿನಾಮೆಗೆ ಒತ್ತಾಯಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ವತಿಯಿಂದ 'ಸಂವಿಧಾನ ಸಂರಕ್ಷಣಾ ಜಾಥಾ’ ಹಮ್ಮಿಕೊಂಡಿತು.
ಪ್ರತಿಭಟನೆ ಬಳಿಕ ಪ್ರತಿಭಟನಾಕಾರರು 'ಅಮಿತ್ ಶಾ' ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು, ತುಳಿದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ (ಜ್ಯೋತಿ ಸರ್ಕಲ್) ಮಿನಿವಿಧಾನ ಸೌಧದವರೆಗೆ 'ಸಂವಿಧಾನ ಸಂರಕ್ಷಣಾ ಜಾಥ’ ನಡೆಯಿತು. ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಅಮಿತ್ ಶಾ ವಿರುದ್ಧ ಘೋಷಣೆ ಕೇಳಿ ಬಂದಿತು.
ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು ಮಾತನಾಡಿ, ನಾವು ಅಂಬೇಡ್ಕರ್ ಎಂದು ನೂರು ಬಾರಿಯಲ್ಲ ಸಾವಿರ, ಲಕ್ಷ ಕೋಟಿ ಬಾರಿಯಲ್ಲ ನಮ್ಮ ಉಸಿರು ಇರುವವರೆಗೂ ಅಂಬೇಡ್ಕರ್ ಹೆಸರು ಹೇಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಕೊಟ್ಟಿದ್ದರಿಂದ ಗೃಹಮಂತ್ರಿಯಾಗಿದ್ದಾರೆ. ಇಲ್ಲದಿದ್ದಲ್ಲಿಅವರು ಬಂದರ್‌ನಲ್ಲಿ ಮುಸ್ಲಿಂ ಸೋದರರೊಂದಿಗೆ ಅಡಿಕೆ ವ್ಯಾಪಾರ ಮಾಡಬೇಕಾಗಿತ್ತು. ಅವರು ಅಂಬೇಡ್ಕರ್ ನೀಡಿದ ಭಿಕ್ಷೆಯಿಂದ ಬದುಕುತ್ತಿದ್ದಾರೆ. ಅಮಿತ್ ಶಾ ಕ್ಷಮೆ ಕೇಳದಿದ್ದರೆ ಬಿಜೆಪಿಯ ದಲಿತರೂ ಸುಮ್ಮನೆ ಇರಲಿಕ್ಕಿಲ್ಲ ಎಂದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ, ಬಿಜೆಪಿಯವರು ಸಂವಿಧಾನವನ್ನು ಒಪ್ಪುವುದಿಲ್ಲ. ಒಪ್ಪದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ. ಅಮಿತ್ ಶಾರಂತಹ ಓರ್ವ ರೌಡಿಶೀಟರ್, ಎನ್‌ಕೌಂಟರ್ ಸ್ಪೆಷಲಿಸ್ಟ್ ಹಾಗೂ ಗಡಿಪಾರು ಆದವರು ಇಂದು ದೇಶದ ಗೃಹಸಚಿವ ಆಗಿದ್ದರೆ ಅದಕ್ಕೆ ಅಂಬೇಡ್ಕರ್ ಕಾರಣ. ತಕ್ಷಣ ಅಮಿತ್ ಶಾ ದೇಶದ ಜನತೆಯ ಮುಂದೆ ಕ್ಷಮೆಯಾಚಿಸಲಿ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, 'ಜೈ ಗಾಂಧಿ ಜೈ ಬೀಮ್ ಜೈ ಸಂವಿಧಾನ್' ಮುಂದಿಟ್ಟು ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.
PublicNext
06/01/2025 05:00 pm