ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ವೈಮನಸ್ಸಿನಿಂದಾಗಿ ಮನೆತೊರೆದು ಭಿಕ್ಷಾಟನೆ : 20 ವರ್ಷಗಳ ಬಳಿಕ ಮನೆ ಸೇರಿದ ಹಿರಿಯ ಜೀವ !

ಉಡುಪಿ : ಕಳೆದ 20 ವರ್ಷಗಳಿಂದ ಮನೆಯವರ ಸಂಪರ್ಕಕ್ಕೆ ಸಿಗದೆ ದೂರ ಉಳಿದುಕೊಂಡಿದ್ದ ವೃದ್ಧರನ್ನು ಮನೆ ಮಂದಿಗೆ ಹಸ್ತಾಂತರಿಸುವಲ್ಲಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ, ಹೊಸಬದುಕು ಆಶ್ರಮ ಮತ್ತು‌ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಯಶಸ್ವಿಯಾಗಿದೆ.

ನಲವತ್ತು ದಿನಗಳ ಹಿಂದೆ, ಶ್ರೀಕೃಷ್ಣ ಮಠದ‌ ರಥಬೀದಿಯಲ್ಲಿ ವೃದ್ಧರೊಬ್ಬರು ಯಾತ್ರಿಕರಲ್ಲಿ ಭಿಕ್ಷೆ ಯಾಚಿಸುತ್ತಿರುವುದನ್ನು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು ಗಮನಿಸಿದ್ದರು. ವಿಚಾರಿಸಿದಾಗ ಜೀವನ‌‌‌ ನಿರ್ವಹಣೆಗೆ ಅಸಹಾಯಕತೆ ಎದುರಾಗಿರುವುದರಿಂದ, ಬಿಕ್ಷಾಟನೆಯಿಂದ ಜೀವನ ಸಾಗಿಸುತ್ತಿರುವುದಾಗಿ ವೃದ್ಧರು ಹೇಳಿಕೊಂಡಿದ್ದರು. ಭಿಕ್ಷಾಟನೆ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ವೃದ್ಧರ ಮನವೊಲಿಸಿದ ಒಳಕಾಡು, ಬಳಿಕ ಕೋರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು.

ಆಶ್ರಮದ ಸಂಚಾಲಕ ವಿನಯಚಂದ್ರ ಅವರು ಅದೆಷ್ಟೋ ದಿನಗಳಿಂದ ಸ್ನಾನಾದಿಗಳಿಂದ ದೂರ ಉಳಿದಿದ್ದ ವೃದ್ಧರನ್ನು ಶುಚಿಗೊಳಿಸಿ, ಪೌಷ್ಟಿಕ ಆಹಾರ ಒದಗಿಸಿ ಸಧೃಡವಾಗಿಸಿದರು. ಬಳಿಕ‌ ವೃದ್ಧರ ಪೂರ್ವಾಪರಗಳನ್ನು ಕಲೆ ಹಾಕಿದಾಗ ವೃದ್ಧರು ಕುಂದಾಪುರ ಭಾಗದವರೆಂದು ತಿಳಿಸಿದರು.‌ ಬಳಿಕ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳ ನೆರವು ಪಡೆದು ಅವರ ಮೂಲಕ ವೃದ್ಧರ ಸಂಬಂಧಿಕರನ್ನು ಆಶ್ರಮಕ್ಕೆ ಬರಮಾಡಿಸಿ ವೃದ್ಧರನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು.

ವೈಮನಸ್ಸಿನಿಂದಾಗಿ ವೃದ್ಧರು ಮನೆ ತ್ಯಜಿಸಿದ್ದರೆಂದು ತಿಳಿದುಬಂದಿತು. ಈ ಮಾನವೀಯ ಕಾರ್ಯಾಚರಣೆಯಲ್ಲಿ ಜಿಲ್ಲಾ ಯೋಜನಾ ಸಂಯೋಜಕಿ ಅಶ್ವಿನಿ, ಆಪ್ತ ಸಮಾಲೋಚಕ ರೋಶನ್ ಅಮೀನ್ ಭಾಗಿಯಾಗಿದ್ದರು.

Edited By : Shivu K
Kshetra Samachara

Kshetra Samachara

04/01/2025 08:07 pm

Cinque Terre

5.58 K

Cinque Terre

2