ಚೆಟ್ಟಳ್ಳಿ: ಕೆದಕಲ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಮಹೇಂದ್ರ ಬೊಲೆರೋ ಕಾರು ಡಿಕ್ಕಿಯಾಗಿಸಿದ ಹಿನ್ನೆಲೆಯಲ್ಲಿ ಪಾದಚಾರಿ ಬಲ್ಲಾರಂಡ ಹರೀಶ್ ತಮ್ಮಯ್ಯ ( 55) ಮೃತಪಟ್ಟ ಘಟನೆ ಸುಂಠಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ 3 ವರ್ಷಗಳಿಂದ ಕೆದಕಲ್ ನ ಖಾಸಗಿ ತೋಟದಲ್ಲಿ ಸೇವೆ ಸಲ್ಲಿಸುತ್ತಿರುವ ಚೆಟ್ಟಳ್ಳಿ ಈರಳೆ ವಳಮುಡಿ ಗ್ರಾಮದ ಬಲ್ಲಾರಂಡ ಹರೀಶ್ ತಮ್ಮಯ್ಯ ತನ್ನ ಕೆಲಸ ಕಾರ್ಯ ಮುಗಿಸಿ ಸುಂಠಿಕೊಪ್ಪದಲ್ಲಿ ಬಸ್ ಏರಿ ಕೆದಲ್ ನಲ್ಲಿ ಬಸ್ಸಿನಿಂದ ಇಳಿದು ಪಕ್ಕದ ಅಂಗಡಿಯವರಿಗೆ ಹೊಸ ವರ್ಷದ ಶುಭಾಶಯ ಹೇಳಿ ಸಂಜೆ ಸುಮಾರು 6.45ರ ಸಮಯ ರಸ್ತೆ ದಾಟುತ್ತಿದ್ದ ಸಂದರ್ಭ ಕುಶಾಲನಗರದ ಕಡೆಯಿಂದ ಮಡಿಕೇರಿಗೆ ಬರುತಿದ್ದ ಇಂಡಿಯಾ ಗ್ಯಾರೇಜಿನ ನೋಂದಣಿ ಗೊಳ್ಳದ ನೂತನ ಬೊಲೆರೋ ನಿಯೋ ಕಾರು ಹರೀಶ್ ರವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ನೆಲಕ್ಕೆ ಬಿದ್ದ ಹರೀಶ್ ಅವರಿಗೆ ಸ್ಥಳೀಯರು ಉಪಚಾರ ನೀಡಿದರೂ ತಲೆಗೆ ತೀವ್ರ ಪೆಟ್ಟಾದ ಕಾರಣ ಸುಂಠಿಕೊಪ್ಪ ಠಾಣೆಗೆ ಮಾಹಿತಿ ನೀಡಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕುಟುಂಬಸ್ಥರು ರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ನ್ಯೂರೋ ಫಸ್ಟ್ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ದೃಶ್ಯ ಸ್ಥಳೀಯ ಮಳಿಗೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
04/01/2025 10:41 am