ಮಂಗಳೂರು: ನಗರದ ಪಡೀಲ್ ಬಳಿ ನಿರ್ಮಾಣಗೊಳ್ಳುತ್ತಿರುವ ದ.ಕ.ಜಿಲ್ಲಾಧಿಕಾರಿ ಕಚೇರಿಯ ಕಾಮಗಾರಿಯನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಶುಕ್ರವಾರ ಮಧ್ಯಾಹ್ನ ಪರಿಶೀಲನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಸ್ಮಾರ್ಟ್‌ಸಿಟಿ ಅಧಿಕಾರಿ ಅರುಣ್ ಪ್ರಭ, ಮನಪಾ ಇಂಜಿನಿಯರ್ ಸಲಹೆಗಾರ ಧರ್ಮರಾಜ್ ಅವರಿಂದ ಡಿಸಿ ಕಚೇರಿಯ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ದ.ಕ.ಜಿಲ್ಲಾಧಿಕಾರಿ ಕಚೇರಿಗೆ ಸುಸಜ್ಜಿತ ಕಟ್ಟಡ ಬೇಕೆಂದು 2013ರಲ್ಲಿ ಪಡೀಲ್‌ನಲ್ಲಿ ಜಾಗ ನಿಗದಿಪಡಿಸಲಾಗಿತ್ತು. 75ಕೋಟಿ ರೂ. ವೆಚ್ಚದಲ್ಲಿ ಡಿಸಿ ಕಚೇರಿ ಕಾಮಗಾರಿ ನಡೆಯುತ್ತಿದೆ. ಶೀಘ್ರ ಈ ಕಟ್ಟಡ ಸಿಎಂ ಅವರಿಂದ ಲೋಕಾರ್ಪಣೆಯಾಗಲಿದೆ. ಜನವರಿ 17ರಂದು ರಾಜ್ಯ ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನೆ ಆಗಲಿದೆ. ಅಂತಹ ಸಂದರ್ಭದಲ್ಲಿ ಡಿಸಿ ಕಚೇರಿಯನ್ನು ಲೋಕಾರ್ಪಣೆ ಮಾಡುವ ಯೋಜನೆಯಿದೆ. ಅದಕ್ಕಿಂತ ಮೊದಲು ಕಾಮಗಾರಿ ಮುಗಿಸಲು ಪ್ರಯತ್ನ ಮಾಡುತ್ತೇವೆ. ಬಹುತೇಕ ಕಾಮಗಾರಿ ಮುಗಿದಲ್ಲಿ ಅದೇ ದಿನ ಲೋಕಾರ್ಪಣೆ ಮಾಡಲಿದ್ದೇವೆ ಎಂದರು.
ಡಿಸಿ ಕಚೇರಿಯ ಮುಂಭಾಗವನ್ನು ತುಳುನಾಡಿನ ಪರಂಪರೆಯ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಲಾಂಛನ, ರಾಜ್ಯಕ್ಕೆ ಸಂಬಂಧಿಸಿದ ಲಾಂಛನ ಸೇರಿದಂತೆ ಇಡೀ ರಾಷ್ಟ್ರದಲ್ಲೇ ಮಾದರಿಯೆನಿಸುವ ದೊಡ್ಡಮಟ್ಟದ ಡಿಸಿ ಕಚೇರಿಯನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಎಲ್ಲಾ ಇಲಾಖೆಯನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗುತ್ತದೆ ಎಂದು ಸ್ಪೀಕರ್ ಖಾದರ್ ಮಾಹಿತಿ ನೀಡಿದರು.
PublicNext
04/01/2025 10:00 am