ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಗುತ್ತಿಗೆದಾರನ್ ಆತ್ಮಹತ್ಯೆ : ಸೂಕ್ತ ತನಿಖೆ ಮಾಡಿ ಎಂದ ಕುಟುಂಬಸ್ಥರು

ಗದಗ : ಇತ್ತೀಚೆಗೆ ನೌಕರರು, ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಬೀದರ್ ಸಚಿನ್ ಆತ್ಮಹತ್ಯೆ ಕೇಸ್ ಮಾಸುವ ಮುನ್ನವೆ ಗದಗ ನಿರ್ಮಿತಿ ಕೇಂದ್ರ ಪ್ರೊಜೆಕ್ಟ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂಜಿನಿಯರ್ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಎದ್ದಿವೆ. ಸೈಟ್ ವಿಸಿಟ್ ಅಂತ ಮನೆಯಿಂದ ಲಾಡ್ಜ್ ಗೆ ಬಂದು ಸುಸೈಡ್ ಮಾಡಿಕೊಂಡಿದ್ದು ಯಾಕೆ? ಮೃತ ಆ ಇಂಜಿನಿಯರ್ ಗೆ ಯಾರಾದ್ರೂ ಕಿರುಕುಳ ಕೊಟ್ರಾ? ಯಾರೋ ಮಾಡಿದ್ದ ಸಾಲಕ್ಕೆ ಆ ಲೇವಾದೇವಿ ವ್ಯವಹಾರಿಗಳ ಕಾಟವೆನಾದ್ರೂ ಇತ್ತಾ? ಪ್ರೊಮೋಷನ್ ಸಂದರ್ಭದಲ್ಲಿ ಇಂತಹ ಘಟನೆಗೆ ಮುಂದಾಗಿದ್ದಾದ್ರೂ ಏಕೆ? ಅನೇಕ ಸಂಶಯಗಳು ನಿರ್ಮಿತಿ ಕೇಂದ್ರ ಇಂಜಿನಿಯರ್ ಸಾವಿನ ಕುರಿತಾದ ಗದಗನಿಂದ ಬಂದ ಒಂದು ವರದಿ ಇಲ್ಲಿದೆ ನೋಡಿ.

ಹೌದು ಗದಗ ನಿರ್ಮಿತಿ ಕೇಂದ್ರದ‌ ಪ್ರೊಜೆಕ್ಟ್ ಇಂಜನೀಯರ್, ಗುತ್ತಿಗೆ ಆಧಾರಿತ ನೌಕರ ಶಂಕರಗೌಡ ಪಾಟೀಲ ಎಂಬಾತ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗದಗ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಪಲ್ಲವಿ ಲಾಡ್ಜ್ ನ ರೂಮ್ ನಂಬರ್ 513 ರಲ್ಲಿ ಈ ಘಟನೆ ನಡೆದಿದೆ. ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲ ಹಾತಲಗೇರಿ ನಿವಾಸಿಯಾಗಿದ್ದು, ಹತ್ತಾರು ವರ್ಷಗಳಿಂದ ಗದಗ ನಗರದ ಹಾತಲಗೇರಿ ನಾಕಾ ಬಳಿಯ ವಾಸವಾಗಿದ್ದರು. ಗದಗ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಇಂಜನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲಾ ರೋಣ ತಾಲೂಕಿನ ನಿರ್ಮಿತಿ ಕೇಂದ್ರ ಉಸ್ತುವಾರಿಯನ್ನು ಇವರೇ ನೋಡಿಕೊಳ್ಳುತ್ತಿದ್ದರು.

ಶುಕ್ರವಾರ ಬೆಳಿಗ್ಗೆ 7:30 ರ ಸುಮಾರಿಗೆ ಸೈಟ್ ವಿಸಿಟ್ ಮಾಡಿ ಬರುವುದಾಗಿ ಮನೆಯವರ‌ ಬಳಿ ಹೇಳಿ ಹೊರಬಂದಿದ್ದಾರೆ‌. ಮನೆಯಿಂದ ಬಂದು ಪಲ್ಲವಿ ಲಾಡ್ಜ್ ನಲ್ಲಿ ಹಗ್ಗದೊಂದಿಗೆ ನೇಣಿಗೆ ಶರಣಾಗಿದ್ದಾರೆ. ಆದ್ರೆ ಈ ಇಂಜನಿಯರ್ ಆತ್ಮಹತ್ಯೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಅವರ ಸಾಲದ ಬಗ್ಗೆ ಅಥವಾ ಕೆಲಸ, ಅಧಿಕಾರಿಗಳು, ಸಿಬ್ಬಂದಿಗಳು ಕಿರುಕುಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅವನಿಗೆ ಮೋಸ ಮಾಡಿ ಯಾರೋ ನೇಣಿಗೆ ಹಾಕಿದ್ದಾರೆ. ಪ್ರೊಮೋಷನ್ ವಿಷಯದಲ್ಲಿ ಶಂಕರಗೌಡ ಹಾಗೂ ಮತ್ತೋರ್ವ ಸಹೋದ್ಯೋಗಿ ನಡುವೆ ಪೈಪೋಟಿ ನಡೆದಿತ್ತು. ಇದು ಕೂಡಾ ಸಾವಿಗೆ ಕಾರಣ ಇರಬಹುದು. ಈ ಬಗ್ಗೆ ತನಿಖೆ ಮಾಡಿ ಸತ್ಯಾಂಶವನ್ನು ಬಯಲು ಮಾಡಿ ಅಂತಿದ್ದಾರೆ ಕುಟುಂಬಸ್ಥರು.

ಶಂಕರಗೌಡನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ‌. ಸಣ್ಣ ಪುಟ್ಟ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅವನಲ್ಲ. ಈ ಬಗ್ಗೆ ತನಿಖೆ ಆಗಬೇಕು ಅಂತಿದ್ದಾರೆ ಕುಟುಂಬಸ್ಥರು.

ಇಂಜನಿಯರ್ ಶಂಕರಗೌಡನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನಿಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತ್ಮಹತ್ಯೆ ಹಿಂದಿನ ಕಾರಣವನ್ನು ಬೆನ್ನತ್ತಿದ್ದಾರೆ. ಈ ವಿಚಾರ ವಿಪಕ್ಷಗಳಿಗೆ ಸರ್ಕಾರದ ಮೇಲೆ ಚಾಟಿ ಬೀಸಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ವರದಿ - ಮಲ್ಲಿಕಾರ್ಜುನ ಪಬ್ಲಿಕ್ ನೆಕ್ಸ್ಟ್ ಗದಗ

Edited By : Ashok M
PublicNext

PublicNext

04/01/2025 09:45 am

Cinque Terre

27.24 K

Cinque Terre

0