ಬೆಂಗಳೂರು: ಎಣ್ಣೆ ನಶೆಯಲ್ಲಿ ಅನ್ಯ ಮಾರ್ಗದಲ್ಲಿ ಹೋಗುವುದಲ್ಲದೆ ಚಾಲಕ ತೋರಿದ ದುರ್ನಡತೆಗೆ ಆತಂಕಗೊಂಡ ಮಹಿಳಾ ಪ್ರಯಾಣಿಕರೊಬ್ಬರು ಚಲಿಸುತ್ತಿದ್ದ ಆಟೋದಿಂದಲೇ ಹೊರಕ್ಕೆ ಜಿಗಿದು ತಪ್ಪಿಸಿಕೊಂಡಿರುವ ಘಟನೆ ರಾಜಧಾನಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಥಣಿಸಂದ್ರದ ನಿವಾಸಿಯಾಗಿರುವ ಮಹಿಳೆಯು ನಿನ್ನೆ ರಾತ್ರಿ ಕೆಲಸ ನಿಮಿತ್ತ ಹೊರ ಹೋಗಿದ್ದರು. ಮನೆಗೆ ಹೋಗಲು ಹೊರಮಾವಿನಿಂದ ಥಣಿಸಂದ್ರಕ್ಕೆ ನಮ್ಮ ಯಾತ್ರಿ ಆ್ಯಪ್ ನಲ್ಲಿ ಬುಕ್ ಮಾಡಿದ್ದರು. 8.55ರ ಸುಮಾರಿಗೆ ಪಿಕಪ್ ಲೊಕೇಷನ್ ಗೆ KA03AM8956 ಆಟೋ ಬಂದಿದೆ. ಚಾಲಕನಿಗೆ ಒಟಿಪಿ ಹೇಳಿ ಆಟೋ ಹತ್ತಿದ ಮಹಿಳೆಯನ್ನು ಥಣಿಸಂದ್ರಕ್ಕೆ ಡ್ರಾಪ್ ಮಾಡದೆ ಹೆಬ್ಬಾಳ ಕಡೆ ಹೋಗುತ್ತಿದ್ದ.
ತಪ್ಪಾದ ದಾರಿಯಲ್ಲಿ ಹೋಗುತ್ತಿರುವುದನ್ನ ಕಂಡ ಮಹಿಳೆ, ಚಾಲಕನಿಗೆ ಹೇಳಿದರೂ ಪ್ರತಿಕ್ರಿಯಿಸಿಲ್ಲ.
ಆಟೋ ನಿಲ್ಲಿಸುವಂತೆ ಸೂಚಿಸಿದರೂ ಚಾಲನೆ ಮುಂದುವರಿಸಿದ್ದ. ಇದರಿಂದ ಆತಂಕಗೊಂಡ ಮಹಿಳೆ, ಚಲಿಸುತ್ತಿರುವಾಗಲೇ ಆಟೋದಿಂದ ಜಿಗಿದಿದ್ದಾರೆ ಎಂದು ಮಹಿಳೆಯ ಪತಿ ಅಜರ್ ಖಾನ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ ನನ್ನ ಹೆಂಡತಿ ಹೊರಮಾವಿನಿಂದ ಥಣಿಸಂದ್ರಕ್ಕೆ ಹೋಗಲು ನಮ್ಮಯಾತ್ರಿ ಆ್ಯಪ್ ಮೂಲಕ KA03AM8956 ನಂಬರ್ ನ ಆಟೋ ಬುಕ್ ಮಾಡಿದ್ದರು. ಆದರೆ, ಮದ್ಯ ಕುಡಿದಿದ್ದ ಚಾಲಕ, ನನ್ನ ಹೆಂಡತಿಯನ್ನು ಹೆಬ್ಬಾಳ ಕಡೆಗೆ ತಪ್ಪು ಸ್ಥಳಕ್ಕೆ ಕರೆದೊಯ್ದಿದ್ದಾನೆ.
ಆತಂಕದಿಂದ ಪತ್ನಿಯು ಚಲಿಸುತ್ತಿರುವ ಆಟೋದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಅಜರ್ ಪೋಸ್ಟ್ ಮಾಡಿದ್ದಾರೆ.
ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ತಿಳಿಸಿದರೂ ನಮ್ಮ ಯಾತ್ರಿ ಸಂಸ್ಥೆಯೂ ಆರಂಭದಲ್ಲಿ ವಿಳಂಬ ಧೋರಣೆ ಅನುಸರಿಸಿತ್ತು. ಈ ಬಗ್ಗೆ ಹೆಚ್ಚು ಒತ್ತಾಯಿಸಿದಾಗ ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿ ಆಟೋ ಚಾಲಕನ ಐಡಿ ಬ್ಲಾಕ್ ಮಾಡಿರುವುದಾಗಿ ಅಜರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.ಆಟೋ ಚಾಲಕ ಸುನಿಲ್ ಎನ್ನಲಾಗುತ್ತಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಮೃತಹಳ್ಳಿ ಪೊಲೀಸರಿಗೆ ಅಜರ್ ದೂರು ನೀಡಿದ್ದಾರೆ.
PublicNext
03/01/2025 10:49 pm