ಚಿಕ್ಕಮಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರು, ಶಿಶುಗಳ ಸರಣಿ ಸಾವು ಪ್ರಕರಣ ಖಂಡಿಸಿ ರಾಜ್ಯ ಸರ್ಕಾರದ ನಿರ್ಲಕ್ಷ ವಿರೋಧಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ಬಿಜೆಪಿ ಪಾಂಚಜನ್ಯ ಕಚೇರಿಯಿಂದ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಆಜಾದ್ ಪಾರ್ಕ್ ವೃತದಲ್ಲಿ ಪ್ರತಿಭಟನೆ ನಡೆಸಿದರು. ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ರಾಜ್ಯ ಸರ್ಕಾರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಗರ್ಭಿಣಿ ಸ್ತ್ರೀಯರ ಆರೈಕೆಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದಿಂದ ನೀಡುವ ವಿವಿಧ ಯೋಜನೆಗಳು ಗರ್ಭಿಣಿಯರಿಗೆ ತಲುಪುತ್ತಿಲ್ಲ ಇದಕ್ಕೆಲ್ಲ ಮುಖ್ಯ ಕಾರಣ ರಾಜ್ಯ ಸರ್ಕಾರದ ನಿರ್ಲಕ್ಷ, ಮಾತೃ ವಂದನಾ ಯೋಜನೆಯ ಹಣ ತಲುಪಿಸುವುದರಲ್ಲಿ ರಾಜ್ಯ ಸರ್ಕಾರದ ಎರಡು ಇಲಾಖೆಗಳು ವಿಫಲವಾಗಿದೆ ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಲಾಯಿತು.ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸರ್ಕಾರದ ಬೇಜವಾಬ್ದಾರಿತನದಿಂದ ಸಂಪೂರ್ಣ ಹದಗೆಟ್ಟಿದೆ. ಸಿಬ್ಬಂದಿಗಳ ಕೊರತೆಯಿಂದಾಗಿ ಪಿ ಎಚ್ ಸಿ ಗಳು ಸೊರಗುತ್ತಿವೆ. ಅಂಬುಲೆನ್ಸ್ ಗಳಿಗೆ ಸರಿಯಾಗಿ ಇಂಧನ ಸಿಗುತ್ತಿಲ್ಲ. ಹಾಗೂ ಸಿಬ್ಬಂದಿ ವರ್ಗಗಳಿಗೂ ಸರ್ಕಾರ ಸಂಬಳ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ಬ್ಲಡ್ ಬ್ಯಾಂಕ್ ಗಳ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ಈ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಪರಿಶೀಲಿಸಿ, ಮೇಲ್ದರ್ಜೆಗೇರಿಸಬೇಕೆಂದು ಇದೇ ವೇಳೆ ಪ್ರತಿಭಟನಾಕಾರರು ಒತ್ತಾಯಿಸಿದರು.
Kshetra Samachara
03/01/2025 02:22 pm