ಮಂಗಳೂರು: ಸಾವಿರಾರು ವರ್ಷಗಳ ಇತಿಹಾಸವಿರುವ ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆಯ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶವಿರುವುದು ಲ್ಯಾಬ್ ಪರೀಕ್ಷೆಯಿಂದ ಪತ್ತೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾರಿಂದಲೂ ಸಕಾರಾತ್ಮಕ ಉತ್ತರ ದೊರಕಿಲ್ಲ ಎಂದು ಗುಜ್ಜರಕೆರೆ ತೀರ್ಥಸಂರಕ್ಷಣಾ ವೇದಿಕೆ ಅವಲತ್ತುಕೊಂಡಿದೆ.
ಪ್ರತೀ ವರ್ಷದಂತೆ ಈ ಬಾರಿ 15 ದಿನಗಳ ಹಿಂದೆ ಗುಜ್ಜರಕೆರೆಯ ನೀರಿನ ಸ್ಯಾಂಪಲ್ ಅನ್ನು ಫಿಶರೀಸ್ ಕಾಲೇಜಿಗೆ ರವಾನಿಸಿ ತಪಾಸಣೆ ನಡೆಸಲಾಗಿತ್ತು. ವರದಿಯಲ್ಲಿ ಕೆರೆಗೆ ಹರಿದು ಬರುವ ತ್ಯಾಜ್ಯ ನೀರಿನಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. ಆದರೆ ಬೃಹತ್ತಾದ ಕೆರೆಯಲ್ಲಿ ಹರಡುವ ಕಾರಣ ಕೆರೆಯ ನೀರಿನಲ್ಲಿ ಬ್ಯಾಕ್ಟೀರಿಯಾ ಅಂಶ ಹೆಚ್ಚಿನ ರೀತಿಯಲ್ಲಿ ಪತ್ತೆಯಾಗಿಲ್ಲ. ಆದ್ದರಿಂದ ಹೊರಗಿನಿಂದ ಬರುವ ತ್ಯಾಜ್ಯ ನೀರಿನಿಂದಲೇ ಬ್ಯಾಕ್ಟೀರಿಯಾ ಅಂಶವಿರುವುದು ವರದಿಯಲ್ಲಿ ಬಯಲಾಗಿದೆ.
ಈ ಎರಡೂ ವರದಿಯನ್ನು ತೀರ್ಥ ಸಂರಕ್ಷಣಾ ವೇದಿಕೆ ಸ್ಥಳೀಯ ಶಾಸಕರು, ಮೇಯರ್ ಹಾಗೂ ಮನಪಾಕ್ಕೆ ನೀಡಿದೆ. 15 ದಿನಗಳಾದರೂ ಈವರೆಗೆ ಯಾವುದೇ ಕ್ರಮವಾಗಿಲ್ಲ. ಕೆರೆಗೆ ಹರಿದು ಬರುವ ಕಲುಷಿತ ನೀರು ತಡೆಯಾಗದೆ ಗುಜ್ಜರಕೆರೆಯ ನೀರು ಶುದ್ಧವಾಗುವುದಿಲ್ಲ. ಆದ್ದರಿಂದ ತ್ಯಾಜ್ಯ ನೀರು ಸಂಪರ್ಕವಾಗುವುದನ್ನು ತಡೆದಲ್ಲಿ ಮಾತ್ರ ನೀರು ಶುದ್ಧವಾಗಿ ಬಳಕೆಗೆ ಯೋಗ್ಯವಾಗಬಹುದು ಎಂಬುದು ಗುಜ್ಜರಕೆರೆ ತೀರ್ಥಸಂರಕ್ಷಣಾ ವೇದಿಕೆಯ ಅಭಿಪ್ರಾಯ.
ಸ್ಥಳೀಯರ ಇಂತಹ ಅಭಿಪ್ರಾಯ, ಬೇಡಿಕೆಗಳಿಗೆ ಜನಪ್ರತಿನಿಧಿಗಳು ಪ್ರೋತ್ಸಾಹ ನೀಡಿದರೆ ಮಾತ್ರ ಪರಿಸರ ಸಂಪತ್ತು ಉಳಿಯಬಹುದು. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಕಲುಷಿತ ಪರಿಸರವನ್ನು ನಾವು ದಾಟಿಸಬೇಕಾಗುತ್ತದೆ. ಹತ್ತಾರು ಕೋಟಿ ಸ್ಮಾರ್ಟ್ ಸಿಟಿ ಹಣವನ್ನು ಖರ್ಚು ಮಾಡಿ ನಿರ್ಮಾಣವಾಗಿರುವ ಗುಜ್ಜರಕೆರೆಯ ನೀರು ಶುದ್ಧವಾಗಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು ಇನ್ನಾದರೂ ಮನಸ್ಸು ಮಾಡಬೇಕಿದೆ.
Kshetra Samachara
03/01/2025 01:32 pm