ಮಂಗಳೂರು: ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಯೆನಪೊಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಕಳೆದ 15ದಿನಗಳಿಂದ ಆಸ್ಪತ್ರೆಯಲ್ಲೇ ಠಿಕಾಣಿ ಹೂಡಿರುವ ಆತನಿಗೆ ಯಾವ ಸರ್ಜರಿಯ ಅಗತ್ಯವಿದೆ ಎಂಬ ಬಗ್ಗೆ ಯೆನೆಪೊಯಾ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿ ಎಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಆತನಿಗೆ ಇರುವ ಕಾಯಿಲೆ ಯಾವುದು, ಯಾವ ಸರ್ಜರಿ ಮಾಡಲಾಗುತ್ತಿದೆ, ಯಾವ ಚಿಕಿತ್ಸೆ ನೀಡಲಾಗುತ್ತಿದೆ, ಇಷ್ಟುದಿನಗಳಾದರೂ ಆತ ಏಕೆ ಗುಣಮುಖನಾಗಿಲ್ಲ, ಎಷ್ಟು ದಿನದಲ್ಲಿ ಗುಣಮುಖನಾಗಿ ಬಿಡುಗಡೆಯಾಗುತ್ತಾನೆ ಎಂಬುದರ ಬಗ್ಗೆಯೂ ಆಸ್ಪತ್ರೆ ತಿಳಿಸಬೇಕು.
ಅಷ್ಟೊಂದು ಗಂಭೀರವಾದ ಆರೋಗ್ಯ ಸಮಸ್ಯೆಯಿದ್ದಲ್ಲಿ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯಲ್ಲಿ ಯಾಕೆ ಅದನ್ನು ಪ್ರಸ್ತಾವಿಸಿಲ್ಲ. ಆದ್ದರಿಂದ ದುಡ್ಡಿನ ಆಸೆಗಾಗಿ ಆಸ್ಪತ್ರೆಯವರು ಆತನನ್ನು ರಕ್ಷಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆ ಮಾಡಿರುವ ಮನೋಹರ್ ಪಿರೇರಾ ಅವರ ಬ್ಯಾಂಕ್ ಸಾಲ ತೀರಿಸಲು ಚ್ಯಾರಿಟಿಯಿಂದ ಬಂದ ಹಣವನ್ನು ಅನಿಲ್ ಲೋಬೊ ಡ್ರಾ ಮಾಡಿ ಗುಳುಂ ಮಾಡಿದ್ದಾನೆ. ಮನೋಹರ್ ಪಿರೇರಾ ಅವರಿಂದ ಪಡೆದ ಮೂರೂ ಚೆಕ್‌ಗಳಲ್ಲಿ 9ಲಕ್ಷ ಡ್ರಾ ಮಾಡಿದ್ದು ಯಾರು..? ಮನೋಹರ್ ಪಿರೇರಾ ಅವರ ಸೆಲ್ಫ್ ಚೆಕ್ ಅನ್ನು ಅವರ ಅನುಪಸ್ಥಿತಿಯಲ್ಲಿ ಡ್ರಾ ಮಾಡಿದ್ದು ಯಾರು? ಅದನ್ನು ಅನಿಲ್ ಲೋಬೊಗೆ ಯಾಕಾಗಿ ನೀಡಲಾಗಿದೆ. ಇದರಲ್ಲಿ ಬ್ಯಾಂಕ್ ಸಿಬ್ಬಂದಿಯೂ ಶಾಮಿಲಾಗಿದ್ದಾರೆ ಎಂಬ ಶಂಕೆಯಿದೆ ಈ ಬಗ್ಗೆ ತನಿಖೆಯಾಗಬೇಕು.
ಅನಿಲ್ ಲೋಬೊ ವಿರುದ್ಧ ಎಂಸಿಸಿ ಬ್ಯಾಂಕ್‌ನಲ್ಲಿ ಬೇರೆ ಅವ್ಯವಹಾರ ಮಾಡಿರುವ ಬಗ್ಗೆ ಆರೋಪಗಳಿವೆ. ಈ ಬಗ್ಗೆ ಸಹಕಾರಿ ಇಲಾಖೆಗೆ ದೂರು ನೀಡಿದ್ದರೂ ಯಾಕೆ ತನಿಖೆಯಾಗಿಲ್ಲ ಎಂಬುದರ ಬಗ್ಗೆಯೂ ತನಿಖೆಯಾಗಲಿ ಎಂದು ರೋಬರ್ಟ್ ರೊಸಾರಿಯೋ ಆಗ್ರಹಿಸಿದ್ದಾರೆ.
PublicNext
03/01/2025 10:27 am