ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕೆಲ ವರ್ಷದಿಂದ ಪರ ವಿರೋಧದ ವಿವಾದ ಅಷ್ಟಾಗಿ ಇರ್ಲಿಲ್ಲ. ಆದ್ರೆ ಈ ಬಾರಿಯ ದತ್ತಜಯಂತಿ ನಂತ್ರ ವಿವಾದದ ಮೇಲೆ ವಿವಾದದ ಕಿಡಿ ಹತ್ತುತ್ತಿದೆ.
ಕೆಲ ದಿನದ ಹಿಂದೆ ಮುಸ್ಲಿಮರು ನಡೆಸಿದ ಗ್ಯಾರವಿ ಹಬ್ಬಕ್ಕೆ ವಿಎಚ್ ಪಿ, ಬಜರಂಗದಳ ವಿರೋಧ ವ್ಯಕ್ತಪಡಿಸಿ ಅನುಮತಿ ನೀಡಿದ ಜಿಲ್ಲಾಧಿಕಾರಿ ವಿರುದ್ಧವೇ ರಾಜ್ಯಪಾಲರು, ಕೇಂದ್ರ ಗೃಹಸಚಿವರಿಗೆ ದೂರು ನೀಡಲಾಗಿದೆ. ಇದರ ಬೆನ್ನಲ್ಲೆ ಈಗ ಮತ್ತೊಂದು ಹೊಸ ವಿವಾದ ಸೃಷ್ಟಿಯಾಗಿದೆ. ಅದು ಬಾಜಿ ರೋಟಿ ಫಾತೇಹ. ಡಿಸೆಂಬರ್ 29ರಂದು ಶಾಖಾದ್ರಿ ನೇತೃತ್ವದಲ್ಲಿ ಫಾತೇಹ ನಡೆಸಲು ಬೇಯಿಸಿದ ಆಹಾರವನ್ನ ಗುಹೆಯೊಳಗೆ ಕೊಂಡೋಯ್ಯಲು ಮುಂದಾದಾಗ ಇದಕ್ಕೆ ಅಡ್ಡಿ ಪಡಿಸಿರುವ ಆರೋಪ ಕೇಳಿ ಬಂದಿದೆ. ಮುಜರಾಯಿ ಇಓ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಅಡ್ಡಿಪಡಿಸಿದ್ದು ಇದಕ್ಕೆ ಶಾ ಖಾದ್ರಿ ವಂಶಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ದತ್ತಪೀಠದ ಗುಹೆಯೊಳಗೆ ಯಾವುದೇ ಬೇಯಿಸಿದ ಆಹಾರಕ್ಕೆ ಅವಕಾಶ ವಿಲ್ಲ. ಅಲ್ಲಿಗೆ ಕೇವಲ ಹಣ್ಣು, ಕಾಯಿ, ಹೂವು ಮಾತ್ರ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಬೇಕು. ನ್ಯಾಯಲಯದಿಂದಲೂ ಆ ಆದೇಶವೇ ಇರೋದು ಅಂತ ಹಿಂದೂ ಸಂಘಟನೆ ಮುಖಂಡರು ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಗ್ಯಾರವಿ ಹಬ್ಬಕ್ಕೆ ವಿರೋಧ ಮಾಡಿದ್ರಿಂದ ಈ ಬಾರಿ ರೋಟಿ ಹಬ್ಬಕ್ಕೆ ಜಿಲ್ಲಾಡಳಿತ ತಡೆ ಹಾಕಿದೆ ಅಂತಾರೇ ವಿಎಚ್ ಪಿ ಮುಖಂಡರು.
ದತ್ತಜಯಂತಿಯ ನಂತರ ಇನಾಂ ದತ್ತಾತ್ರೇಯ ಬಾಬಬುಡನ್ ಸ್ವಾಮಿ ದರ್ಗಾ ಒಂದಲ್ಲ ಒಂದು ವಿವಾದಕ್ಕೆ ವೇದಿಕೆಯಾಗ್ತಿದೆ. ಈ ವಿವಾದದ ಕಿಡಿ ಮುಂದುವರೆಯುತ್ತಾ? ಅಥವಾ ಇಲ್ಲಿಗೆ ನಿಲ್ಲುತ್ತಾ ಎಂಬ ಪ್ರಶ್ನೆ ಕಾಫಿನಾಡಿಗರಲ್ಲಿ ಕಾಡುತಿದೆ.
ವರದಿ: ಡ್ಯಾನಿ, ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು
PublicNext
02/01/2025 04:36 pm