ಹಾಸನ: ಪ್ರತಿಯೊಬ್ಬ ಮನುಷ್ಯನಿಗೆ ಗುಣಮಟ್ಟದ ಆಹಾರ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ, ಗುಣಮಟ್ಟದ ಆಹಾರ ವಿತರಣೆ ಹಾಗೂ ಹಂಚಿಕೆಯಲ್ಲಿ ಲೋಪ ಕಂಡುಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್. ಕೃಷ್ಣ ಎಚ್ಚರಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯದಲ್ಲಿ ಹಸಿವು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ, ಅವುಗಳನ್ನು ಪ್ರತಿಯೊಬ್ಬ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಆಹಾರ ಆಯೋಗ ಕೆಲಸ ಮಾಡುತ್ತಿದೆ. ಹಂಚಿಕೆಯಲ್ಲಿ ಅವ್ಯವಹಾರ ತಡೆಯುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದ್ದು ಹಾಸನದಲ್ಲಿಯೂ ಇಂದಿನಿಂದ ಮೂರ್ನಾಲ್ಕು ದಿನ ಹಾಸನ ಜಿಲ್ಲೆಯ ವಿವಿಧೆಡೆ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುವುದು ಎಂದರು.
ಭೇಟಿ ವೇಳೆ ವಸತಿ ನಿಲಯಗಳು, ಸಾರ್ವಜನಿಕ ಆಸ್ಪತ್ರೆಗಳು, ಹೋಟೆಲ್, ಶಾಲೆಗಳು ಹಾಗೂ ಅಂಗನವಾಡಿಗಳಲ್ಲಿ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ, ಸಾರ್ವಜನಿಕರಿಗೆ ನೀಡುವ ಆಹಾರ ಪದಾರ್ಥಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಗುಣಮಟ್ಟದ ಆಹಾರ ಹಾಗೂ ಆಹಾರ ಪದಾರ್ಥಗಳನ್ನು ವಿತರಣೆಯಲ್ಲಿ ಆಹಾರ ಇಲಾಖೆಯ ವಿರುದ್ಧವಾಗಿ ವಿತರಣೆಯಲ್ಲಿ ತಾರತಮ್ಯ, ತೂಕದಲ್ಲಿ ವ್ಯತ್ಯಾಸ, ಕಳಪೆ ಆಹಾರ ವಿತರಣೆ, ಕಂಡು ಬಂದರೆ ಅಂತವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದರು.
ಹೋಟೆಲ್ ಗಳ ಆಹಾರಗಳಲ್ಲಿ
ಹಾನಿಕಾರಕ ಬಣ್ಣ ಬಳಕೆ, ಅಕ್ರಮ ಪಡಿತರ ಸಾಗಣೆ, ವಿತರಣೆ ವೇಳೆ ತೂಕದಲ್ಲಿ ವ್ಯತ್ಯಾಸ ಮಾತ್ರವಲ್ಲದೆ ವಿಧವಾ ವೇತನ, ವೃದ್ದಾಪ್ಯ ವೇತನ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಬ್ರಷ್ಟಾಚಾರ ಅಥವಾ ಅವ್ಯವಹಾರದ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ತಮಗೆ ದೂರುಗಳನ್ನು ನೀಡಬಹುದಾಗಿದೆ, ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಅವ್ಯವಹಾರಕ್ಕೆ ಆಯೋಗ ಅವಕಾಶ ನೀಡುವುದಿಲ್ಲ ಎಂದು ಹೇಳಿದರು
ಸುದ್ದಿಗೋಷ್ಟಿಯಲ್ಲಿ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ ದೊಡ್ಡಲಿಂಗಣ್ಣವರ, ರೋಹಿಣಿಪ್ರಿಯ, ಕೆ.ಎಸ್ ವಿಜಯಲಕ್ಷ್ಮಿ, ಇತರರು ಇದ್ದರು.
Kshetra Samachara
02/01/2025 01:50 pm