ಹಾಸನ: ಹಲವು ವರ್ಷಗಳಿಂದ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ವಂಚಿಸಿ ಅಕ್ರಮವಾಗಿ ಇತರರಿಗೆ ಭೂ ಮಂಜೂರಾತಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೀಮ್ ಆರ್ಮಿ ನೇತೃತ್ವದಲ್ಲಿ ಆಲೂರು ತಾಲೂಕು ಬೂದನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ವೇಳೆ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರದೀಪ್ ಮಾತನಾಡಿ ಆಲೂರು ತಾಲೂಕಿನ ಪಾಳ್ಯ ಹೋಬಳಿ ಬೂದನಹಳ್ಳಿ ಗ್ರಾಮದ ಸರ್ವೆ ನಂಬರ್ 10ರಲ್ಲಿ ಇರುವ ನೂರು ಎಕರೆ ಸರ್ಕಾರಿ ಜಾಗದ ಪೈಕಿ 80 ಎಕರೆ ಜಮೀನಿನನ್ನು ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಡಲಾಗಿದೆ. ಇನ್ನುಳಿದ 20 ಎಕರೆ ಜಮೀನಿನಲ್ಲಿ ಅದೇ ಗ್ರಾಮದ 10 ಜನ ದಲಿತ ಕುಟುಂಬಕ್ಕೆ ಸೇರಿದ ರೈತರು ತಲಾ ಎರಡು ಎಕರೆಯಂತೆ 1984 - 85ರಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಆದರೆ ಇದೀಗ ರೈತರ ಗಮನಕ್ಕೆ ಬರದಂತೆ ಅಧಿಕಾರಿಗಳು ರೈತರ ಜಮೀನನ್ನು ಬೇರೆಯವರಿಗೆ ಮಂಜೂರು ಮಾಡಿ ಕೊಟ್ಟಿದ್ದಾರೆ ಎಂದು ದೂರಿದರು .
ಉಳುಮೆ ಮಾಡಿಕೊಂಡು ಬಂದಿರುವ ರೈತರು ತಮ್ಮ ಹೆಸರಿಗೆ ಖಾತೆ ಮಾಡಿಕೊಂಡು ಸಾಗುವಳಿ ಚೀಟಿ ಪಡೆದು ಅಗತ್ಯ ದಾಖಲೆಗಳನ್ನು ಹೊಂದಿದ್ದಾರೆ. ಅಲ್ಲದೆ ಬ್ಯಾಂಕ್ ಮತ್ತು ಸೊಸೈಟಿ ಗಳಿಂದ ಸಾಲವನ್ನು ಪಡೆದಿದ್ದಾರೆ ಆದಾಗ್ಯೂ ಕಳೆದ ಮೂವತ್ತು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ವಂಚಿಸಿ ಬೇರೆಯವರಿಗೆ ಅದೇ ಜಮೀನನ್ನು ಖಾತೆ ಮಾಡಿ ಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿರುವವರನ್ನು ಈ ಬಗ್ಗೆ ಪ್ರಶ್ನೆ ಮಾಡಿದರೆ ರೌಡಿಗಳನ್ನು ಕಳೆದುಕೊಂಡು ಬಂದು ರೈತರ ಮೇಲೆ ಹಲ್ಲೆ ಮಾಡಿಸಿದ್ದಾರೆ. ಅಲ್ಲದೆ ಅವರು ಬೆಳೆದಿರುವ ಬೆಳೆಗಳನ್ನು ನಾಶಪಡಿಸಿ ಅವರಿಗೆ ನಿರಂತರ ಕಿರುಕುಳ ನೀಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ಈ ಹಿಂದೆಯೂ ಆಲೂರು ಪೊಲೀಸ್ ಠಾಣೆಗೆ ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಈಗಾಗಲೇ ಅಕ್ರಮವಾಗಿ ಮಂಜೂರಾಗಿರುವ ಖಾತೆಯನ್ನು ವಜಾ ಗೋಳಿಸಿ ಬಡ ರೈತರ ಪಾಲಿಗೆ ಉಳಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷ ನವೀನ್, ಹಾಸನ ತಾಲೂಕು ಅಧ್ಯಕ್ಷ ಹೇಮಂತ್, ಮುಖಂಡರಾದ ಗಿರೀಶ್, ರಘುಚಂದ್ರ, ಸಿದ್ದೇಶ್ ಹಾಗೂ ನೊಂದ ರೈತರಾದ ಸಿದ್ದಯ್ಯ, ಚಿಕ್ಕಯ್ಯ, ಸಗನಯ್ಯ, ಚಂದ್ರಮ್ಮ, ಮಲ್ಲೇಶ್, ದೊಡ್ಡಯ್ಯ, ಇತರರು ಇದ್ದರು.
Kshetra Samachara
31/12/2024 02:26 pm