ಹುಬ್ಬಳ್ಳಿ: ಹೊಸ ವರ್ಷ ಬರುತ್ತಿದ್ದಂತೆ ಎಲ್ಲರಲ್ಲೂ ಹುಮ್ಮಸ್ಸು, ಉತ್ಸಾಹ ಬರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಅದೆಷ್ಟೋ ಸಂತಸ, ಕಹಿ ಘಟನೆಗಳು ನಡೆದು ಹೋಗಿವೆ. ಇನ್ನು ಕೇವಲ ಎರಡು ದಿನಗಳಲ್ಲಿ ತೆರೆಮರೆಗೆ ಸರಿಯಲಿರುವ 2024 ಹಲವು ಕಾರಣಗಳಿಂದ ಹುಬ್ಬಳ್ಳಿಯ ಜನರು ನೆನಪಿಡುವಂತೆ ಮಾಡಿದೆ. ವಿದ್ಯಾರ್ಥಿನಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಇಡೀ ದೇಶಾದ್ಯಂತ ಸದ್ದು ಮಾಡಿದ್ದವು. ಈ ಘಟನೆಯು ಪೊಲೀಸ್ ಆಯುಕ್ತ, ಅಧಿಕಾರಿಗಳ ಎತ್ತಂಗಡಿಗೂ ಕಾರಣವಾಯಿತು. ವರ್ಷದ ಅಂತ್ಯದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ ಹುಬ್ಬಳ್ಳಿಗರಿಗೆ ಇನ್ನಷ್ಟು ಆತಂಕ ಮೂಡಿಸಿತು.
ಹೌದು,,, ಏಪ್ರಿಲ್ 18ರಂದು ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣ ಹುಬ್ಬಳ್ಳಿ ಸೇರಿದಂತೆ ದೇಶದ ಜನರನ್ನು ತಲ್ಲಣಗೊಳಿಸಿತ್ತು. ಚಾಕುವಿನಿಂದ ಇರಿದಿದ್ದ ಹಂತಕ ಫಯಾಜ್ ಬಂಧನವಾಗಿದ್ದರೂ ನೇಣುಗಂಬಕ್ಕೇರಿಸುವಂತೆ ಆಗ್ರಹ ಕೇಳಿಬಂದಿತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿಂದೂ-ಮುಸ್ಲಿಂ ಹಾಗೂ ಲವ್ ಜಿಹಾದ್ ಸ್ವರೂಪ ಪಡೆದಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಹಳಷ್ಟು ನಾಯಕರು ನೇಹಾ ಮನೆಗೆ ಬಂದು ಹೋದರು. ರಾಜ್ಯ ಸರ್ಕಾರವು ಈ ಪ್ರಕರಣವನ್ನು ಸಿಐಡಿ ತನಿಖೆಗೂ ನೀಡಿತ್ತು. ಚುನಾವಣೆ ಮುಗಿಯುತ್ತಿದ್ದಂತೆ ಇದರ ಕಾವು ಮರೆ ಮಾಚಿತು. ಫಯಾಜ್ ವಿರುದ್ಧ 383 ಪುಟಗಳ ಚಾರ್ಚ್ ಶೀಟ್ ಸಲ್ಲಿಕೆಯಾಗಿದೆ. ಇದೀಗ ಪ್ರಕರಣ ಯಾವ ಹಂತದಲ್ಲಿದೆ ಎಂದು ಯಾರೂ ಕೇಳುತ್ತಿಲ್ಲ.
ಇನ್ನು ಇದಾದ ತಿಂಗಳೊಳಗೆ ಮೇ 15ರಂದು ಹುಬ್ಬಳ್ಳಿಯ ಮತ್ತೊಬ್ಬ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ನಡೆಯಿತು. ಈಕೆಯ ಪ್ರಿಯತಮ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ್ ಎಂಬಾತ ಅಂಜಲಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಕೊಲೆಗೆ ಮುನ್ನ ನೇಹಾ ಹಿರೇಮಠ ಮಾದರಿಯಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಕುರಿತು ಬೆಂಡಿಗೇರಿ ಠಾಣೆಗೆ ದೂರು ಕೊಡಲು ಅಂಜಲಿ ಕುಟುಂಬದವರು ಹೋದಾಗ ಪೊಲೀಸರು ಸಬೂಬು ಹೇಳಿ ಕಳುಹಿಸಿದ್ರು.. ಈ ನಿರ್ಲಕ್ಷ್ಯ ಅಂಜಲಿ ಸಾವಿಗೆ ಕಾರಣವೆಂದು ಎಲ್ಲೆಡೆ ಪ್ರತಿಭಟನೆಗಳು ನಡೆದವು. ಕರ್ತವ್ಯ ಲೋಪ ಆರೋಪದಡಿ ಡಿಸಿಪಿ ಎಂ. ರಾಜೀವ, ಎಸಿಪಿ ವಿಜಯಕುಮಾರ್ ತಳವಾರ, ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಬಿ. ಚಿಕ್ಕೋಡಿ ಹಾಗೂ ಮುಖ್ಯಪೇದೆ ರೇಖಾ ಹಾವರಡ್ಡಿ ಅವರನ್ನು ಅಮಾನತು ಮಾಡಲಾಗಿತ್ತು. ಬಳಿಕ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರನ್ನು ವರ್ಗಾವಣೆ ಆಗಿದ್ದೇ ತಡಾ, ನೂತನವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಅವರು ಆಗಮಿಸುತ್ತಿದ್ದಂತೆ ಅವಳಿ ನಗರದಲ್ಲಿ ಖಾಕಿ ಫುಲ್ ಅಲರ್ಟ್ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿತು.
ಜುಲೈ 3ರಂದು ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾದ ಎನ್. ಶಶಿಕುಮಾರ್, ಮೊದಲು ಶುರು ಮಾಡಿದ್ದು ಏರಿಯಾ ಡಾಮಿನೇಷನ್, ಇದಾದ ಬಳಿಕ ಪೆಟ್ರೋಲಿಂಗ್, ಪೊಲೀಸ್ ಪರೇಡ್, ಬಡ್ಡಿ ಕುಳಗಳ ಬಂಧನ, ಡ್ರಗ್ಸ್ ಸಾಗಣೆ, ಮಾರಾಟ ಮಾಡುವವರು ಮತ್ತು ಬಳಕೆದಾರರ ಬಂಧನ ಪ್ರಕ್ರಿಯೆ ನಡೆಸಿದರು. ಜ್ಯುವೆಲರಿ ಶಾಪ್ ಕಳವು ಆರೋಪಿ ಫರ್ಹಾನ್ ಶೇಖ್ ಕಾಲಿಗೆ ಗುಂಡು ಹಾರಿಸುವುದರ ಮೂಲಕ ಗುಂಡಿನ ಸದ್ದು ಆರಂಭವಾಯಿತು. ಕಳ್ಳತನ, ಮರ್ಡರ್ ಕೇಸ್ ನಲ್ಲಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸುವುದು ಆಗಾಗ ನಡೆದಿದೆ. ಇದುವರೆಗೆ 9 ಫೈರಿಂಗ್ ಪ್ರಕರಣಗಳು ನಡೆದಿದ್ದು, 11 ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಇದರಲ್ಲಿ 23 ಪೊಲೀಸರಿಗೆ ಗಾಯಗಳೂ ಆಗಿವೆ.
ಇನ್ನು 2022ರ ಏಪ್ರಿಲ್ 16 ರಲ್ಲಿ ನಡೆದಿದ್ದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರವು ಹಿಂಪಡೆಯುತ್ತಿದ್ದಂತೆಯೇ ರಾಜ್ಯಾದ್ಯಂತ ಹೋರಾಟದ ಕಾವು ತೀವ್ರಗೊಂಡಿತು. ಎನ್‌ಐಎ ತನಿಖೆ ನಡೆಸಿ 3 ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಪ್ರಕರಣ ಹಿಂಪಡೆದಿದ್ದರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೋರಾಟ ನಡೆಸಿದರು.
ಫೇಸ್ ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮೂಲಕ ವಂಚನೆ ಮಾಡುತ್ತಿದ್ದ ವಂಚಕರು, ಇತ್ತೀಚೆಗೆ ತಮ್ಮ ವರಸೆ ಬದಲಿಸಿದ್ದಾರೆ. ಸಿಐಡಿ, ಸಿಬಿಐ, ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಲಾರಂಭಿಸಿದ್ದಾರೆ. ಈ ವಂಚನೆ ಕೂಪಕ್ಕೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕೆಲವರು ವಂಚನೆ ಬಲೆಗೆ ಬಿದ್ದು 4 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಡಿಜಿಟಲ್ ಅರೆಸ್ಟ್‌ನಲ್ಲಿ ಕಳೆದುಕೊಂಡಿದ್ದಾರೆ.
ಇನ್ನು ಕ್ಲಬ್ ರೋಡ್ ನಲ್ಲಿ ಫ್ಲೈ ಓವರ್ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಉಪನಗರ ಠಾಣೆ ಎಎಸ್‌ಐ ನಾಭಿರಾಜ ದಾಯಣ್ಣವರ ಮೃತಪಟ್ಟ ಘಟನೆ ಸೆಪ್ಟೆಂಬರ್ 15 ರಂದು ನಡೆಯಿತು. ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ಇರುವುದರಿಂದ ಈ ಅವಘಡ ನಡೆದು ಹೋಯಿತು. ಕಾಮಗಾರಿ ಗುತ್ತಿಗೆ ಪಡೆದ ಮಹಾರಾಷ್ಟ್ರ ಮೂಲದ ಝಂಡು ಕಂಪನಿಯ 19 ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನೊಂದು ದುರಂತ ಅಂದ್ರೆ ಉಣಕಲ್ ಅಚ್ಚವ್ವ ಕಾಲೋನಿಯಲ್ಲಿ ಡಿಸೆಂಬರ್ 23 ರಂದು ನಡೆದ ಸಿಲಿಂಡರ್ ಸ್ಫೋಟದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳ ಪೈಕಿ ಆರು ಜನ ಈಗಾಗಲೇ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಅಯ್ಯಪ್ಪ ಕೆಎಂಸಿಆರ್‌ಐನಲ್ಲಿ ದಾಖಲಾಗಿರುವ 12 ವರ್ಷದ ಬಾಲಕ ಚೇತರಿಸಿಕೊಳ್ಳುತ್ತಿದ್ದು, ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಇದಿಷ್ಟು 2024 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಂತ ದುರ್ಘಟನೆಗಳು. ಮಾಸು ಹೋಗುತ್ತಿರುವ ಈ ವರ್ಷದ ಕಹಿ ನೆನಪುಗಳು. ಮುಂಬರುತ್ತಿರುವ 2025 ನೇ ವರ್ಷದಲ್ಲಿ ಎಲ್ಲರೂ ಜೀವನದಲ್ಲಿ ಸಂತೋಷ ಮೂಡಿಸಲಿ ಎಂಬುದು ಎಲ್ಲರ ಆಶಯ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/12/2024 04:30 pm