ಮಡಿಕೇರಿ: ಕ್ರೈಸ್ತ ಧರ್ಮ ಹಾಗೂ ಏಸು ಕ್ರಿಸ್ತರ ಕುರಿತು ಅವಹೇಳನ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನಗರದ ಸಂತ ಮೈಕಲರ ಚರ್ಚ್ ಎದುರು ಶಾಂತಿಯುತ ಪ್ರತಿಭಟನೆ ನಡೆಸಿತು.
ದಿವ್ಯಬಲಿ ಪೂಜೆ ಮೂಲಕ ಕ್ರೈಸ್ತ ಸಮುದಾಯದವರು ಚರ್ಚ್ ಎದುರು ಜಮಾಯಿಸಿ ಮೌನ ಪ್ರತಿಭಟನೆ ನಡೆಸಿದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮಡಿಕೇರಿ ತಾಲೂಕು ಘಟಕ ಉಪಾಧ್ಯಕ್ಷ ಮೈಕಲ್ ವೇಗಸ್ ಮಾತನಾಡಿ, ಕ್ರೈಸ್ತರ ಪವಿತ್ರ ಹಬ್ಬವಾದ ಕ್ರಿಸ್ ಮಸ್ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಬೇರೆ ಜಿಲ್ಲೆಯ ಲೋಕೇಶ್ ಎಂಬಾಂತ ಕ್ರೈಸ್ತ ಧರ್ಮ ಹಾಗೂ ಏಸುಕ್ರಿಸ್ತರ ಕುರಿತು ಅವಹೇಳನ ಪದಗಳನ್ನು ಬಳಸಿ ನಿಂದನೆ ಮಾಡಿ ಸಂದೇಶ ಹರಿಬಿಟ್ಟಿದ್ದಾರೆ. ಇದಕ್ಕೆ ಕೊಡಗಿನ ವ್ಯಕ್ತಿಯೂ ಅವಹೇಳನ ಪದದ ಮೂಲಕ ಧರ್ಮವನ್ನು ನಿಂದಿಸಿ ಭಾವನೆಯನ್ನು ಕೆರಳಿಸಿದ್ದಾರೆ. ಈ ಹಿನ್ನೆಲೆ ಈಗಾಗಲೇ 5 ತಾಲೂಕುಗಳಲ್ಲಿಯೂ ಪೊಲೀಸ್ ದೂರು ನೀಡಿ ಬಂಧನಕ್ಕೆ ಆಗ್ರಹಿಸಲಾಗಿದೆ. ಶಾಂತಿಯನ್ನು ಸಾರುವ ಕ್ರೈಸ್ತ ಸಮುದಾಯಕ್ಕೆ ಕಾನೂನು ಮೇಲೆ ವಿಶ್ವಾಸವಿದೆ. ಯಾವುದೇ ಧರ್ಮದ ಅವಹೇಳನ ಮಾಡುವುದು ಸರಿಯಲ್ಲ. ಸೌಹರ್ದತೆಯಲ್ಲಿರುವ ಕೊಡಗು ಜಿಲ್ಲೆಯಲ್ಲಿ ಕೆಲ ಕಿಡಿಗೇಡಿಗಳು ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಕೈಹಾಕುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದ ಅವರು, ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳದಿದ್ದಲ್ಲಿ ಸಂಘಟಿತರಾಗಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಮೈಕಲ್ ಮಾರ್ಷಲ್, ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಪಿಯೂಷ್ ಪೆರೇರ , ತಾಲೂಕು ಕಾರ್ಯದರ್ಶಿ ವಿಲ್ಫ್ರೆಂಡ್ ಕೊರೇರ, ಖಜಾಂಜಿ ಶರತ್ ಜೋಸೆಫ್, ಯುವ ಘಟಕದ ತಾಲೂಕು ಉಪಾಧ್ಯಕ್ಷ ಅಲಿಸ್ಟರ್ ಜಾಕ್, ದಿವ್ಯಜ್ಯೋತಿ ಸಂಘದ ನಿರ್ದೇಶಕ ಕೆ.ಜಿ. ಪೀಟರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
Kshetra Samachara
29/12/2024 04:41 pm