ಮಡಿಕೇರಿ: ಪ್ರಸ್ತುತ ದಿನಗಳಲ್ಲಿ ಯುವಕರಿಗೆ ಕ್ರೀಡಾಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿದ್ದು,ಕ್ರೀಡಾಪಟುಗಳು ಕ್ರೀಡೆಯ ಮೂಲಕ ಬದುಕಟ್ಟಿಕೊಳ್ಳಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ ಲೋಕೇಶ್ ಕರೆ ನೀಡಿದರು.ಕಂಡಕರೆಯ
ಗಾಂಧಿ ಯುವಕ ಸಂಘದಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಅಂಡರ್ 20 ಕಾಲ್ಚೆಂಡು ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಕ್ರೀಡಾಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ.
ಕೊಡಗು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಫುಟ್ಬಾಲ್ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ತೊಡಗಿಕೊಂಡಿದ್ದಾರೆ.
20 ವರ್ಷದೊಳಗಿನ ಯುವಕರಿಗಾಗಿ ನಡೆಯುತ್ತಿರುವ ಕಾಲ್ಚೆಂಡು ಪಂದ್ಯಾವಳಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಯುವ ಫುಟ್ಬಾಲ್ ಪಟುಗಳಿಗೆ ಸೂಕ್ತ ವೇದಿಕೆಯಾಗಿದೆ.
ಗಾಂಧಿ ಯುವಕ ಸಂಘವು ನಿರಂತರವಾಗಿ ಕ್ರೀಡೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಚೆಟ್ಟಳ್ಳಿ ಭಾಗದಲ್ಲಿ ಹೆಸರುವಾಸಿಯಾಗಿದೆ ಎಂದು ವಿ.ಕೆ ಲೋಕೇಶ್ ಹೇಳಿದರು.ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಹಕೀಂ ಸುಂಟ್ಟಿಕೊಪ್ಪ ಮಾತನಾಡಿ, ಗಾಂಧಿ ಯುವಕ ಸಂಘವು ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂಡರ್ 20 ಕಾಲ್ಚೆಂಡು ಪಂದ್ಯಾವಳಿಯನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ.ಕಳೆದ ನಾಲ್ಕು ವರ್ಷಗಳಿಂದ ಗಾಂಧಿ ಯುವಕ ಸಂಘವು ನಿರಂತರವಾಗಿ ಚೆಟ್ಟಳ್ಳಿ ಭಾಗದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಡವರಿಗೆ ನೆರಳಾಗಿದ್ದಾರೆ.
ಕಂಡಕರೆಯಲ್ಲಿ ಆಟದ ಮೈದಾನ ಕೊರತೆ ಇದೆ.
ಇದೀಗ ಗಾಂಧಿ ಯುವಕ ಸಂಘವು ಮುಂದಿನ ದಿನಗಳಲ್ಲಿ ಆಟದ ಮೈದಾನವನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು,ಶಾಸಕರು ಮತ್ತು ಸಂಸದರು ಗಾಂಧಿ ಯುವಕ ಸಂಘಕ್ಕೆ ಸರ್ಕಾರದಿಂದ ನೆರವು ನೀಡಬೇಕೆಂದು ಹಕೀಂ ಸುಂಟ್ಟಿಕೊಪ್ಪ ಮನವಿ ಮಾಡಿದರು.
Kshetra Samachara
29/12/2024 09:15 pm