ಸಾಗರ: ನಗರದ ನಾಲ್ಕೂ ಭಾಗಗಳಲ್ಲಿ ರಸ್ತೆ ಅಗಲೀಕರಣ ಮಾಡುವ ಮೂಲಕ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಅಭಿವೃದ್ದಿ ಪಡಿಸಲಾಗುತ್ತದೆಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಭೀಮನಕೋಣೆ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಗಾಂಧಿನಗರ ವೃತ್ತದಿಂದ ರಾಮನಗರ ವೃತ್ತದವರೆಗೆ 6 ಕೋಟಿ ರೂ. ವೆಚ್ಚದ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಇದಕ್ಕೆ ಪೂರಕವಾದ ರಸ್ತೆ ನಿರ್ಮಾಣ ಮಾಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭೀಮನಕೋಣೆ ರಸ್ತೆ ಅಭಿವೃದ್ದಿಗೆ 6 ಕೋಟಿ ರೂ. ಕೆಳದಿ ರಾಣಿ ಚೆನಮ್ಮ ವೃತ್ತದಿಂದ ಶ್ರೀಗಂಧ ಸಂಕೀರ್ಣವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ 5.5 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲಿಯೆ ಕೆಳದಿ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಇದರ ಜೊತೆಗೆ ಬಿ.ಎಚ್.ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಮಾರ್ಕೇಟ್ ರಸ್ತೆ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಕೆಲವರು ಅಭಿವೃದ್ದಿಯಾಗುತ್ತಿಲ್ಲ ಎಂದು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಶಾಸಕನಾದ ಮೇಲೆ ಅಭಿವೃದ್ದಿ ಕಾರ್ಯಗಳು ಹಿಂದಿಗಿಂತ ವೇಗವಾಗಿ ನಡೆಯುತ್ತಿದೆ. ಗಣಪತಿ ಕೆರೆ ಸ್ವಚ್ಚತೆಗೆ ಹಿಂದೆ ಎರಡರಿಂದ ಮೂರು ಕೋಟಿ ರೂ. ಖರ್ಚು ಮಾಡುತ್ತಿದ್ದರು. ನಮ್ಮ ಅವಧಿಯಲ್ಲಿ ಎರಡರಿಂದ ಮೂರು ಲಕ್ಷ ರೂ. ಒಳಗೆ ಕೆರೆ ಸ್ವಚ್ಚಗೊಳಿಸಲಾಗಿದೆ. ವಿಜಯನಗರದ ಈಜುಕೊಳವನ್ನು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ರಿಪೇರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಎಚ್.ಕೆ.ನಾಗಪ್ಪ ,ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ವಿ. ಮಹೇಶ್, ಅರವಿಂದ ರಾಯ್ಕರ್, ಮಧುಮಾಲತಿ, ರವಿಕುಮಾರ್, ಸತೀಶ್, ಸೈಯದ್ ಜಾಕೀರ್, ಕಾಂಗ್ರೇಸ್ ಪ್ರಮುಖರಾದ ಕಲಸೆ ಚಂದ್ರಪ್ಪ, ಉಷಾ, ಪ್ರಭಾವತಿ, ತಾಹೀರ್ ಇನ್ನಿತರರು ಹಾಜರಿದ್ದರು.
Kshetra Samachara
27/12/2024 04:26 pm