ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರು ಭಾಗದ ದಶಕಗಳ ಕನಸು ನನಸಾಗುವ ಕಾಲ ಸನ್ನಿತವಾಗುತ್ತಿದೆ. ಸಿಗಂಧೂರು ಸೇತುವೆ ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿದ್ದು ಇನ್ನು ಕೆಲವೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.
ಜಿಲ್ಲೆಯ ರಾಜಕೀಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಇಚ್ಛಾಶಕ್ತಿ ಫಲವಾಗಿ 2019ರಲ್ಲಿ ಬೃಹತ್ ಸೇತುವೆ ಕಾಮಗಾರಿ ಪ್ರಾರಂಭವಾಗಿತ್ತು. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ 464.23 ಕೋಟಿ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ್ರು.
ಈ ಸೇತುವೆ 2.14 ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲದ ಈ ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿತ್ತು. ಕೊರೋನಾ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣ ಆರಂಭದ ಎರಡು ವರ್ಷ ನಿಧಾನವಾಗಿ ಸಾಗಿದ ಕಾಮಗಾರಿ ನಂತರ ವೇಗ ಪಡೆಯಿತು. ಪ್ರಸ್ತುತ ಆಳವಾದ ಹಿನ್ನೀರಿನಲ್ಲಿ 17 ಪಿಲ್ಲರ್ ಗಳನ್ನು ನಿರ್ಮಿಸಲಾಗಿದ್ದು, ಪಿಲ್ಲರ್ ಗಳ ನಡುವೆ ಪ್ರೀಕಾಸ್ಟ್ ಕಾಂಕ್ರೀಟ್ ಬ್ಲಾಕ್ ಗಳನ್ನು ಜೋಡಿಸುವ ಕೆಲಸ ಭರದಿಂದ ನಡೆಯುತ್ತಿದೆ, ಹಿನ್ನೀರು ಭಾಗದ ಜನರ ಸಂಪರ್ಕಕ್ಕೆ ಬಹುದೊಡ್ಡ ಕೊಡುಗೆ ಇದಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಕೊಲ್ಲೂರು ಮತ್ತು ಸಿಗಂಧೂರು ದೇವಸ್ಥಾನಗಳನ್ನು ಸಂಪರ್ಕಿಸುವ ಸಿಗಂಧೂರು ಕೇಬಲ್ ಸೇತುವೆ ಮುಂದಿನ ನಾಲ್ಕು ತಿಂಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಸಿಗಂಧೂರು ಸೇತುವೆಯು ಭಾರತದ ಕೇಬಲ್ ಆಧಾರಿತ ಸೇತುವೆಗಳಲ್ಲಿ 7ನೇ ಅತಿ ದೊಡ್ಡ ಸೇತುವೆ ಎಂಬ ಖ್ಯಾತಿ ಪಡೆಯಲಿದೆ.
ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, ಇನ್ನು ಕೆಲವೇ ಗರ್ಡರ್ ಬಾಕ್ಸ್‌ಗಳನ್ನು ಅಳವಡಿಕೆ ಮಾಡುವುದು ಮಾತ್ರ ಬಾಕಿಯಿದೆ. ಒಂದೆರಡು ತಿಂಗಳಲ್ಲಿ ಈ ಕಾಮಗಾರಿಯೂ ಮುಕ್ತಾಯಗೊಳ್ಳಲಿದೆ. ಇದಾದ ನಂತರ ಉಳಿದ ಕೆಲಸಗಳನ್ನು ಮುಗಿಸಿಕೊಂಡು, ಸುರಕ್ಷತಾ ತಪಾಸಣೆ ಮಾಡಿದ ನಂತರ ಈ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಇದರಿಂದ ಮಲೆನಾಡಿನ ಜನರ ಬಹುಬೇಡಿಕೆಯ ಸಿಗಂಧೂರು ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಅಂತಿಮ ಹಂತದ ಸೇತುವೆ ನಿರ್ಮಾಣ ಕಾಮಗಾರಿಯ ವಿಡಿಯೋ ವೈರಲ್ ಆಗಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಸೇತುವೆ ಪ್ರವಾಸೋದ್ಯಮದ ಶಕ್ತಿಯಾಗಲಿದೆ ಎನ್ನುತ್ತಾರೆ ಸಂಸದ ಬಿ.ವೈ.ರಾಘವೇಂದ್ರ.
ಒಟ್ಟಾರೆ ಸಿಗಂಧೂರು ಸೇತುವೆ ನಿರ್ಮಾಣದಿಂದಾಗಿ ಶರಾವತಿ ಹಿನ್ನೀರು ಭಾಗದ ಜನರ ಕನಸು ನನಸಾದ್ರೆ, ಮತ್ತೊಂದೆಡೆ ಶಿವಮೊಗ್ಗ ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆಯಾಗಲಿದೆ.
-ವೀರೇಶ್ ಜಿ.ಹೊಸೂರ್, ಪಬ್ಲಿಕ್ ನೆಕ್ಟ್ಸ್, ಶಿವಮೊಗ್ಗ
PublicNext
28/12/2024 06:02 pm