ಬೆಳಗಾವಿ: ಬೆಳಗಾವಿಯ ಸರ್ಕಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಘಟನೆ ಮುಂದುವರಿದಂತಿವೆ. ಇಂದು ಮತ್ತೊಂದು ಬಾಣಂತಿಯ ಸಾವು ಸಂಭವಿಸಿದೆ.
ಹೆರಿಗೆಯಾಗಿದ್ದ ಪೂಜಾ (25) ಎಂಬುವವರು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿನ್ನೆಯಷ್ಟೇ ಗಂಡು ಮಗುವಿಗೆ ಪೂಜಾ ಜನ್ಮ ನೀಡಿದ್ದರು. ಇಂದು ಅಸುನೀಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಪೂಜಾ ಅವರು ಗೋಕಾಲ ತಾಲೂಕಿನ ಕುಂದರಗಿ ಗ್ರಾಮದ ಕಡಕಬಾವಿ ಮೂಲದವರು ಎಂದು ತಿಳಿದುಬಂದಿದೆ.
ಮೊನ್ನೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಓರ್ವ ಬಾಣಂತಿ ಸಾವನ್ನಪ್ಪಿದ್ದರು. ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದರು. ಈ ಮೂಲಕ ಬಿಮ್ಸ್ ಆಸ್ಪತ್ರೆಯಲ್ಲಿ ಇದೇ ವಾರದಲ್ಲಿ ಇಬ್ಬರು ಬಾಣಂತಿಯರ ಸಾವಿನ ಪ್ರಕರಣಗಳು ವರದಿಯಾಗಿವೆ.
ಬಾಣಂತಿ ಸಾವಿನ ಬಗ್ಗೆ ಮಾಹಿತಿ ನೀಡಿರುವ ಬೀಮ್ಸ್ ಹೆರಿಗೆ ವಾರ್ಡ್ ನ ಮುಖ್ಯಸ್ಥ ಡಾ.ವಸಂತ ಕಬ್ಬೂರ, ಕಳೆದ ಡಿಸೆಂಬರ್ 24ರಂದು ಬೀಮ್ಸ್ ಆಸ್ಪತ್ರೆಗೆ 11.20ಕ್ಕೆ ದಾಖಲಾಗಿದ್ರು. ಐದನೇ ಹೆರಿಗೆಗೆ ಪೂಜಾ ಕಡಕಬಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ರು. ಪೂಜಾಗೆ ಮೂರು ಮಕ್ಕಳಿದ್ದಾರೆ. ಒಂದು ಅಬಾರ್ಷನ್ ಕೂಡ ಆಗಿದೆ. ಪೂಜಾ ಏಳು ತಿಂಗಳು ತುಂಬಿದ ಗರ್ಭಿಣಿಯಾಗಿದ್ರು, ಕೋಮಾ ಸ್ಟೇಜ್ ನಲ್ಲಿದ್ರು. ಆ್ಯಂಟಿ ಪೆಟಮ್ ಮೆಕ್ಲಾಮ್ಸಿ ಕೋಮಾದಲ್ಲಿ ಇದ್ದರು.
ಪೂಜಾಗೆ ಅನಿಮೀಯಾ ರೋಗ ಕೂಡ ಇತ್ತು. ಆಸ್ಪತ್ರೆಗೆ ಬಂದಾಗ ಪೂಜಾಗೆ ಪ್ರಜ್ಞೆ ಇರಲಿಲ್ಲ, ಆದರೂ ನಾವು ಏನೆಲ್ಲ ಚಿಕಿತ್ಸೆ ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಪೂಜಾಗೆ ಡೈಲೆಟೆಡ್ ಕಾರ್ಡಿಯೋ ಮಯೋಪತಿ ಇತ್ತು. ಈ ರೋಗದಿಂದ ಹೃದಯ ಪಂಪ್ ಮಾಡಲ್ಲ, ಎದೆ ಉಬ್ಬಿಕೊಳ್ಳುತ್ತವೆ. ಗರ್ಭಾವಸ್ಥೆಯಲ್ಲಿ ಹೃದಯ ದೊಡ್ಡದಾಗುತ್ತೆ, ಈ ಸಂದರ್ಭದಲ್ಲಿ ಹೃದಯ ಪಂಪ್ ಮಾಡಲ್ಲ. ಪಂಪಿಂಗ್ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತೆ ಎಂದರು.
PublicNext
26/12/2024 07:35 pm