ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಕಾಯಕ ಯೋಗಿಗಳಿಗೆ ಅರ್ಥಪೂರ್ಣ ಸನ್ಮಾನ

ಹೊಸದುರ್ಗ: ವೇದಿಕೆ ಇಲ್ಲ, ಅತಿಥಿಗಳಿಲ್ಲ, ಗಣ್ಯರಿಲ್ಲ, ರಾಜಕಾರಣಿಗಳಿಲ್ಲ. ಶಿಷ್ಟಾಚಾರವೂ ಇಲ್ಲ. ಸರ್ಕಾರ ನಡೆಸಬೇಕಾದ ಕಾರ್ಯಕ್ರಮವಾದರೂ ಅದರ ಆದೇಶವಿಲ್ಲ. ಸ್ವಯಂಸೇವಾ ಸಂಸ್ಥೆ, ಸರ್ಕಾರೇತರ ಸಂಘಟನೆಗಳ ಸಹಭಾಗಿತ್ವ ಇಲ್ಲ. ಆದರೂ ಅದು ಅರ್ಥಪೂರ್ಣ, ಅನುಕರಣೀಯ ಹಾಗೂ ಸತ್ಯ ಶುದ್ಧ ಕಾಯಕ ಅಭಿನಂದಿಸುವ ಸಮಾರಂಭ.

ಇಂತಹದೊಂದು ಸನ್ನಿವೇಶ ಕಂಡುಬಂದಿದ್ದು ತಾಲೂಕಿನ ಸಾಣೇಹಳ್ಳಿಯ ಉಪನ್ಯಾಸಕ ರಮೇಶ್ ಹಾಗೂ ಕವಿತಾ ದಂಪತಿ ಮನೆಯಂಗಳದಲ್ಲಿ.ಸಾಕ್ಷರ ಸಹೃದಯ ಸನ್ಮಿತ್ರರ ಸಮೂಹ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆಯದು.

ಬಾಲ್ಯದಿಂದಲೂ ಕೃಷಿ ಕಾಯಕದೊಂದಿಗೆ ಬದುಕು ಕಟ್ಟಿಕೊಂಡು ಸಂಧ್ಯಾ ಕಾಲದಲ್ಲಿರುವ ನಿಜ ಕೃಷಿಕರನ್ನು ಅಭಿನಂದಿಸುವ ಮೂಲಕ ಉಪನ್ಯಾಸಕ ರಮೇಶ್- ಕವಿತಾ ದಂಪತಿ, ವಕೀಲ ಮಂಜುನಾಥ್ ಹಾಗೂ ಸಮಾನ ಮನಸ್ಕ ಸನ್ಮಿತ್ರರು ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಿದರು.

ನಿಜವಾದ ಕೃಷಿಕರನ್ನು ಅಭಿನಂದಿಸುವ ಮೂಲಕ ಅವರ ಪರಿಶ್ರಮವನ್ನು ಯುವ ಪೀಳಿಗೆಗೆ ಪರಿಚಯಿಸಿದರು. ಅಬ್ಬರದ ಭಾಷಣವಿಲ್ಲದ, ಆಡಂಬರವಿಲ್ಲದ, ವೇದಿಕೆಯಿಲ್ಲದ, ನಡೆ ನುಡಿ ಒಂದಾಗಬೇಕು ಎನ್ನುವ ಪರಿಕಲ್ಪನೆಯೊಂದಿಗೆ ಸರಳ, ಸುಂದರ, ವಿನೂತನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.

ಮನೆ ಗೋಡೆ ಮೇಲೆ ರೈತ ದಿನಾಚರಣೆ ಬ್ಯಾನರ್ ಅಲಂಕೃತಗೊಂಡಿತು. ಪೂರ್ವ ನಿರ್ಧಾರದಂತೆ ಮನೆಯಲ್ಲಿ ಕಡಿಮೆ ಜನರು ಕೂಡಿದ್ದರು. ಕೆಲವರು ಮನೆ ಹೊರಗಿನ ಜಗುಲಿಯಲ್ಲಿ ಆಸೀನರಾಗಿದ್ದರು.

ಕಾರ್ಯಕ್ರಮಕ್ಕೆ ಯಾರನ್ನು ಕರೆದಿರಲಿಲ್ಲವಾದರೂ ವಿಷಯ ತಿಳಿದು ಸ್ವ ಪ್ರೇರಣೆಯಿಂದ ಬಂದಿದ್ದರು. ಉಪನ್ಯಾಸಕರು, ವಕೀಲರು, ಶಿಕ್ಷಕರು, ಯುವ ಕೃಷಿಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ಸಂಜೆ 6.15ಕ್ಕೆ ಸರಿಯಾಗಿ ಕೃಷಿಕ ಎಸ್. ಪ್ರಕಾಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಆರಂಭಿಸಿ ಅಚ್ಚುಕಟ್ಟಾಗಿ ನಿರೂಪಿಸಿದರು. ಮಹಾಲಕ್ಷ್ಮಿ ಮಂಜುನಾಥ್ ಭಾವಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಿತ್ರ ಬಳಗದ ಸದಸ್ಯ ವಕೀಲ ಮಂಜುನಾಥ್ ಎಲ್ಲರನ್ನೂ ಸ್ವಾಗತಿಸಿದರು. ರೈತ ಗೀತೆಯ ನಂತರ ಕಾಯಕ ಜೀವಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದ ಸ್ವರೂಪ, ಅಭಿನಂದನೆಯ ಔಚಿತ್ಯ ಸೇರಿ ಇನ್ನಿತರ ವಿಚಾರಗಳ ಕುರಿತು ನಿವೃತ್ತ ಪ್ರಾಚಾರ್ಯ ಈಶ್ವರಪ್ಪ, ನಿವೃತ್ತ ಶಿಕ್ಷಕ ಸಿದ್ದಪ್ಪ, ಉಪನ್ಯಾಸಕ ಡಾ. ಸಂದೇಶ್, ಮಂಜುನಾಥ್, ರಮೇಶ್, ಕವಿತಾ ಮಾತನಾಡಿದರು.

ಅಂತಿಮವಾಗಿ ಸಾಣೇಹಳ್ಳಿಯ 90 ರ ಆಸುಪಾಸಿನಲ್ಲಿರುವ, ಈಗಲೂ ಕೂಡ ಕೃಷಿ ಕಾಯಕದಲ್ಲಿ ತೊಡಗಿರುವ ಕೃಷಿಕರಾದ ವಿರೂಪಾಕ್ಷಪ್ಪ, ಮರುಳಸಿದ್ದಪ್ಪ, ಚೆನ್ನಬಸಪ್ಪ, ಬಸಪ್ಪ, ಮಲ್ಲಯ್ಯ, ಮಹೇಶ್ವರಪ್ಪ ಹಾಗೂ ಗೌರಮ್ಮ ಅವರಿಗೆ ಉಲ್ಲನ್ ಟೋಪಿ, ಹೊದಿಕೆ, ಸ್ವೆಟರ್ ಮತ್ತಿತರ ವಸ್ತುಗಳನ್ನು ನೀಡಿ ಗೌರವಿಸಲಾಯಿತು. ಮಹಿಳೆಯರು ಸನ್ಮಾನಿತರಿಗೆ ಆರತಿ ಬೆಳಗಿದರು.

Edited By : PublicNext Desk
Kshetra Samachara

Kshetra Samachara

26/12/2024 02:11 pm

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ