ರಾಯಭಾಗ: ಅಲಖನೂರ ಶ್ರೀಕರಿಸಿದ್ದೇಶ್ವರ ದೇವಸ್ಥಾನದ ಧ್ರುವ ಎಂಬ ಆನೆಯಿಂದ ಮಾವುತನ ಸಹಾಯಕ ಸಾವಿಗೀಡಾಗಿರುವ
ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಸಂಭವಿಸಿದೆ.
ಅಲಖನೂರ ಗ್ರಾಮದ ಧರೆಪ್ಪ ಭೇವನೂರ (32) ಮೃತಪಟ್ಟಿದ್ದು, ಇವರು ಗ್ರಾಮ ದೇವರಾದ ಶ್ರೀಕರಿಸಿದ್ದೇಶ್ವರ ದೇವಸ್ಥಾನದ ಆನೆಯ ಮಾವುತನ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 21 ವರ್ಷದ ಧ್ರುವ ಹೆಸರಿನ ಈ ಆನೆಗೆ ಮದ ಬಂದ ಹಾಗಿತ್ತು. ಮುಂಜಾನೆ 7 ಗಂಟೆಗೆ ಆನೆಗೆ ಮೇವು ಹಾಕಲು ಹೋದಾಗ ಆನೆಯು ಮಾವುತನ ಸಹಾಯಕನ ಮೇಲೆ ದಾಳಿ ಮಾಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಧರೆಪ್ಪ ಭೇವನೂರ ಅವರಿಗೆ 10 ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಇಂದು ನಡೆದ ದುರ್ಘಟನೆಯಿಂದ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
PublicNext
23/12/2024 10:12 pm