ವಿಜಯಪುರ: ವಿಜಯಪುರ ನಗರದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಜಾಗೃತಿಗಾಗಿ ವೃಕ್ಷಥಾನ್ ಹೆರಿಟೇಜ್ ರನ್ ಯಶಸ್ವಿಯಾಗಿ ನಡೆಯಿತು. ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಎದುರು ಆರಂಭಿಕ 21,10 ಹಾಗೂ 5 ಕಿ.ಮೀ. ಮ್ಯಾರಥಾನ್ ಗೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹಸಿರು ನಿಶಾನೆ ತೋರಿದರು.
ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಓಟಗಾರರು ಮ್ಯಾರಥಾನ್ ನಲ್ಲಿ ಭಾಗವಹಿಸಿದರು. ಮ್ಯಾರಥಾನ್ ಸಾಗುವ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಇಕ್ಕೆಲದಲ್ಲಿ ಜನರು ಸಾಲಾಗಿ ನಿಂತು, ಓಟಗಾರರನ್ನು ಹುರಿ ದುಂಬಿಸುತ್ತಿದ್ದದ್ದು ಕಂಡು ಬಂತು. ಅಪಾರ ಸಂಖ್ಯೆಯ ಜನರು ಉತ್ಸಾಹದಿಂದಲೇ ಓಟದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಎಂ.ಬಿ.ಪಾಟೀಲ್, ಎಂಎಲ್ಸಿ ಸುನೀಲ ಗೌಡ ಪಾಟೀಲ್, ಶಾಸಕ ವಿಠ್ಠಲ ಕಟಕದೊಂಡ ಸೇರಿದಂತೆ ಹಲವರು ಹೆರಿಟೇಜ್ ರನ್ ನಲ್ಲಿ ಐದು ಕಿ.ಮೀ. ಓಡಿ ಓಟಗಾರರನ್ನು ಹುರಿದುಂಬಿಸಿದರು. ಸ್ವಾಮೀಜಿಗಳು ಕೂಡಾ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ವೃಕ್ಷಥಾನ್ ಎಲ್ಲರ ಬೆಂಬಲದಿಂದ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಯಶಸ್ಸು ಕಾಣುತ್ತಿದೆ. ಮುಂದಿನ ವರ್ಷದಿಂದ ಮತ್ತಷ್ಟು ಹಸಿರೀಕರಣ, ಸ್ಮಾರಕಗಳ ರಕ್ಷಣೆಗೆ ಯೋಜನೆ ರೂಪಿಸೋಣ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಓಟಗಾರರು ಓಡುವ ಮಾರ್ಗ ಮಧ್ಯೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಇತ್ತ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಯುವಕ- ಯುವತಿಯರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಇದೇ ವೇಳೆ ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದ ಸ್ಪರ್ಧಾಳುಗಳಿಗೆ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು.
ಒಟ್ಟಿನಲ್ಲಿ ಕಳೆದ ಹಲವು ತಿಂಗಳಿನಿಂದ ಜನತೆ ಕಾತರದಿಂದ ಕಾಯುತ್ತಿದ್ದ ಹೆರಿಟೇಜ್ ರನ್ ಯಶಸ್ವಿಯಾಗಿ ಮುಕ್ತಾಯಗೊಂಡಿತು. ವಿಜಯಪುರ ಜಿಲ್ಲೆಯ ಜನರು ಹೆರಿಟೇಜ್ ರನ್ ಜಾಗೃತಿಗೆ ನಮ್ಮ ಪ್ರೋತ್ಸಾಹ, ಬೆಂಬಲ ಇದೆ ಎಂದು ಈ ರನ್ ನಲ್ಲಿ ಪಾಲ್ಗೊಂಡು ಸಾಬೀತು ಪಡಿಸಿದರು. ಹೆರಿಟೇಜ್ ರನ್ ಮೂಲಕ ಜನರಿಗೆ ಪರಿಸರದ ಕುರಿತು ಜಾಗೃತಿ ಮೂಡಿಸಿದ್ದು, ನಿಜಕ್ಕೂ ಶ್ಲಾಘನೀಯವೇ ಸರಿ.
- ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
22/12/2024 08:46 pm