ಬೆಂಗಳೂರು: ಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನ 1 ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಜಾಲದಲ್ಲಿ ಬೀಳಿಸಿದ ವಂಚಕರು ಬರೋಬ್ಬರಿ 11.83 ಕೋಟಿ ರೂ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆ ಮೂಲದ ಇಲ್ಲಿಯವರೆಗೆ ರಾಜ್ಯದಲ್ಲಿ ವರದಿಯಾದ ಅತ್ಯಧಿಕ ಮೊತ್ತ ಕಳೆದುಕೊಂಡ ಡಿಜಿಟಲ್ ಅರೆಸ್ಟ್ ಪ್ರಕರಣ ಇದಾಗಿದೆ. ಹಣ ಕಳೆದುಕೊಂಡಿರುವ ವಿಜಯ್ ಕುಮಾರ್ ಎಂಬುವರು ನೀಡಿರುವ ದೂರಿನನ್ವಯ ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ವಿಜಯ್ ಕುಮಾರ್ ಅವರಿಗೆ ನವೆಂಬರ್ 11ರಂದು ಬೆಳಿಗ್ಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ "ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ನ್ನ ಕಾನೂನುಬಾಹಿರ ಜಾಹೀರಾತು ಹಾಗೂ ಸಂದೇಶಗಳ ರವಾನೆಯಾಗೆ ಬಳಸಲಾಗಿದೆ. ಆ ನಂಬರ್‌ನಲ್ಲಿ ಸೇವೆಯನ್ನ ಸ್ಥಗಿತಗೊಳಿಸಲಾಗುತ್ತಿದೆ. ಹಾಗೂ ಮುಂಬೈನ ಕೊಲಾಬಾದ ಸೈಬರ್ ಕ್ರೈಂ ಠಾಣೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು, ನೀವು ವಿಚಾರಣೆ ಎದುರಿಸಬೇಕಾಗುತ್ತದೆ'' ಎಂದು ಬೆದರಿಸಿದ್ದಾನೆ.
ಇದಾದ ಕೆಲವೇ ನಿಮಿಷಗಳಲ್ಲಿ ಕರೆ ಮಾಡಿದ್ದ ಮತ್ತೋರ್ವ ಅಪರಿಚಿತ ಸ್ಕೈಪ್ ವಿಡಿಯೋ ಕಾಲಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದಾನೆ, ಅದರಂತೆ ವಿಜಯ್ ಕುಮಾರ್ ಅವರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸ್ ಧಿರಿಸಿನಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಕರೆ ಮಾಡಿ, ''ನಾನು ಮುಂಬೈ ಪೊಲೀಸ್ ಅಧಿಕಾರಿ'' ಎಂದು ಹೇಳಿದ್ದಾನೆ. "ಉದ್ಯಮಿ ನರೇಶ್ ಗೋಯಲ್ ಎಂಬುವವರು ನಿಮ್ಮ ಆಧಾರ್ ಕಾರ್ಡ್ ಬಳಸಿ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು 6 ಕೋಟಿ ರೂ ವಹಿವಾಟು ನಡೆಸಿದ್ದಾರೆ. ಆದ್ದರಿಂದ ಅಕ್ರಮ ಹಣ ವರ್ಗಾವಣೆ ಆರೋಪದಡಿ ಡಿಜಿಟಲ್ ಅರೆಸ್ಟ್ ಮಾಡುತ್ತಿರುವುದಾಗಿ'' ಬೆದರಿಸಿದ್ದಾನೆ. ಹಾಗೂ ಪ್ರಕರಣದ ತನಿಖೆಯ ಕುರಿತಂತೆ ಯಾರಿಗೂ ಮಾಹಿತಿ ನೀಡಬಾರದೆಂದು ಸೂಚಿಸಿದ್ದಾನೆ.
ನವೆಂಬರ್ 25ರಂದು ಪುನಃ ಸ್ಕೈಪ್ ಮೂಲಕ ವೀಡಿಯೋ ಕರೆ ಮಾಡಿದ್ದ ವಂಚಕ "ನಿಮ್ಮ ವಿರುದ್ಧದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನಾವು ಹೇಳಿದಂತೆ ಕೇಳದಿದ್ದರೆ ನಿಮ್ಮ ಕುಟುಂಬ ಸದಸ್ಯರನ್ನ ಸಹ ಬಂಧಿಸಬೇಕಾಗುತ್ತದೆ. ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್ ಖಾತೆಯನ್ನ ಪರಿಶೀಲಿಸಬೇಕಿದ್ದು, ಹಣ ವರ್ಗಾವಣೆ ಮಾಡಬೇಕು'' ಎಂದಿದ್ದಾನೆ.
ಅದರಂತೆ ಮೊದಲ ಬಾರಿಗೆ ವಂಚಕರು ನೀಡಿದ್ದ ಬ್ಯಾಂಕ್ ಖಾತೆಗೆ ವಿಜಯ್ ಕುಮಾರ್ ಅವರು 75 ಲಕ್ಷ ರೂ ಬಳಿಕ ಮತ್ತೊಂದು ಖಾತೆಗೆ 3.41 ಕೋಟಿ ರೂ. ವರ್ಗಾಯಿಸಿದ್ದಾರೆ. ಇದೇ ರೀತಿ ಡಿಸೆಂಬರ್ 12ರವರೆಗೂ ಪ್ರತಿನಿತ್ಯ ವಿಜಯ್‌ಕುಮಾರ್‌ಗೆ ಕರೆ ಮಾಡಿ ಬಂಧನದ ಬೆದರಿಕೆಯೊಡ್ಡಿರುವ ಆರೋಪಿಗಳು ಒಟ್ಟು 11.83 ಕೋಟಿ ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಬ್ಯಾಂಕ್ ಖಾತೆಯಲ್ಲಿದ್ದ ಹಣ ಖಾಲಿಯಾದ ಬಳಿಕವೂ ಸಹ ವಂಚಕರ ಕಿರುಕುಳ ಮುಂದುವರೆದಾಗ ಇದು ಸೈಬರ್ ವಂಚಕರ ಕೃತ್ಯವೆಂಬುದು ವಿಜಯ್ ಕುಮಾರ್ ಅವರಿಗೆ ಅರಿವಾಗಿದೆ. ನಂತರ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ವಿಜಯ್ ಕುಮಾರ್ ದೂರು ನೀಡಿದ್ದಾರೆ. ವಂಚಕರು ಹಣ ವರ್ಗಾಯಿಸಿಕೊಂಡಿರುವ ಖಾತೆಗಳ ವಿವರ ಸಂಗ್ರಹಿಸಲಾಗುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
11 ತಿಂಗಳಲ್ಲಿ 491 ಡಿಜಿಟಲ್ ಅರೆಸ್ಟ್ ಪ್ರಕರಣ
ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿರುವ ಪಟ್ಟಿಯಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನ ಪಡೆದಿದೆ. 2024ರ ನವೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ 641 ಡಿಜಿಟಲ್ ಅರೆಸ್ಟ್ ಪ್ರಕರಣಗಳು ವರದಿಯಾಗಿದ್ದು, 109 ಕೋಟಿ ರೂ ವಂಚಕರ ಪಾಲಾಗಿದೆ. ಆ ಪೈಕಿ ಬೆಂಗಳೂರಿನಲ್ಲಿ 480 ಪ್ರಕರಣಗಳು ವರದಿಯಾಗಿದ್ದು 42.4 ಕೊಟಿ ರೂ ಹಣ ವಂಚಕರ ಪಾಲಾಗಿದೆ. ಕೇವಲ 9 ಕೋಟಿ ರೂ ಮಾತ್ರ ವಾಪಾಸ್ ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
PublicNext
22/12/2024 07:23 pm