ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಪಿಎಫ್ ಹಣ ಪಾವತಿಸದೆ ವಂಚನೆ ಆರೋಪ - ಕ್ರಿಕೆಟಿಗ ರಾಬಿನ್ ಉತ್ತಪ್ಪ ಸ್ಪಷ್ಟನೆ

ಬೆಂಗಳೂರು: ಉದ್ಯೋಗಿಗಳ ಇಪಿಎಫ್ ಹಣ ವಂಚಿಸಿದ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಹಾಗೂ ಆರೋಪ ಎದುರಿಸುತ್ತಿರುವ ಕಂಪನಿಗಳಲ್ಲಿ ತಮ್ಮ ಸ್ಥಾನಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ರಾಜಿನಾಮೆ ನೀಡಿರುವುದಾಗಿ ಮಾಜಿ‌ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ. ಇಪಿಎಫ್ ಹಣ ಪಾವತಿಸದೆ ವಂಚಿಸಿದ ಪ್ರಕರಣದಲ್ಲಿ ವಾರೆಂಟ್ ಜಾರಿಯಾದ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ.

"2018 - 19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣಕಾಸು ತೊಡಗಿಸಿದ್ದೆ. ಅದೇ ಕಾರಣದಿಂದ ಆ ಕಂಪನಿಗಳು ನನ್ನನ್ನ ನಿರ್ದೇಶಕನಾಗಿ ನೇಮಕಗೊಳಿಸಿದ್ದವು. ಆದಾಗ್ಯೂ ಸಹ ನಾನು ಆ ಕಂಪನಿಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರವನ್ನು ಹೊಂದಿರಲಿಲ್ಲ. ಹಾಗೂ ಆ ಕಂಪನಿಗಳ ದೈನಂದಿನ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರಲಿಲ್ಲ.ವೃತ್ತಿಪರ ಕ್ರಿಕೆಟಿಗನಾಗಿ, ನಿರೂಪಕನಾಗಿ, ವೀಕ್ಷಕ ವಿವರಣೆಗಾರನಾಗಿ ನನಗೆ ಆ ಕಂಪನಿಗಳ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಸಮಯವಿರಲ್ಲ ಹಾಗೂ ಅಷ್ಟು ಪರಿಣತಿಯೂ ಇರಲಿಲ್ಲ. ವಾಸ್ತವವಾಗಿ ನಾನು ಇದುವರೆಗೂ ಹಣ ಹೂಡಿಕೆ ಮಾಡಿರುವ ಇತರೆ ಕಂಪನಿಗಳಲ್ಲಿಯೂ ಕಾರ್ಯನಿರ್ವಾಹಕ ಪಾತ್ರವನ್ನು ವಹಿಸಿರುವುದಿಲ್ಲ".

"ವಿಷಾದನೀಯ ಸಂಗತಿಯೆಂದರೆ ಈಗ ಆರೋಪ ಎದುರಿಸುತ್ತಿರುವ ಕಂಪನಿಗಳು ನಾನು ಸಾಲದ ರೂಪದಲ್ಲಿ ನೀಡಿದ ಹಣವನ್ನು ಮರುಪಾವತಿಸಲು ವಿಫಲವಾಗಿವೆ.ಆದ್ದರಿಂದ ನಾನು ಹಲವು ವರ್ಷಗಳ ಹಿಂದೆಯೇ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಹಾಗೂ ಆ ಕಂಪನಿಗಳ ವಿರುದ್ಧ ಪ್ರಸ್ತುತ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ."

''ಆರೋಪ ಎದುರಿಸುತ್ತಿರುವ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಬಾಕಿಯಿರುವ ಇಪಿಎಫ್ ಹಣ ಪಾವತಿಸುವಂತೆ ಒತ್ತಾಯಿಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗಳಿಗೆ ನನ್ನ ಕಾನೂನು ಸಲಹಾ ತಂಡವು ಪ್ರತಿಕ್ರಿಯಿಸಿ, ಆ ಕಂಪನಿಗಳಲ್ಲಿ ನನ್ನ ಪಾತ್ರವಿಲ್ಲ ಎಂದು ದೃಢೀಕರಿಸುವ ದಾಖಲೆಗಳನ್ನ ಒದಗಿಸಿದೆ. ಅದರ ಹೊರತಾಗಿಯೂ ಇಪಿಎಫ್ ಅಧಿಕಾರಿಗಳು ತಮ್ಮ ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಪರಿಹರಿಸಲು ನನ್ನ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಲಿದ್ದಾರೆ'' ಎಂದು ರಾಬಿನ್ ಉತ್ತಪ್ಪ ಸ್ಪಷ್ಟಪಡಿಸಿದ್ದಾರೆ.

Edited By : Nagaraj Tulugeri
PublicNext

PublicNext

21/12/2024 10:00 pm

Cinque Terre

33.65 K

Cinque Terre

1

ಸಂಬಂಧಿತ ಸುದ್ದಿ