ಚಿತ್ರದುರ್ಗ : ಕ್ಷಯ ಮುಕ್ತ ಭಾರತ ಗುರಿ ತಲುಪಿಸುವ ಪ್ರಮುಖ ಹೆಜ್ಜೆಯಾಗಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ದೇಶಾದ್ಯಂತ ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ 2025ರ ಮಾರ್ಚ್ 17 ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಕ್ಷಯ ರೋಗದ ಅಪಾರ ಇರುವವರನ್ನು ಆರೈಕೆ ಮಾಡಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರಾಗೃಹ ಇಲಾಖೆ ಇವರ ಸಹಯೋಗದೊಂದಿಗೆ 100 ದಿನಗಳ ಟಿಬಿ ಮುಕ್ತ ಭಾರತ ನಿರ್ಮಾಣ ತೀವ್ರ ಪ್ರಚಾರ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2025ರ ಹೊತ್ತಿಗೆ ವಾರ್ಷಿಕ ಹೊಸ ಕ್ಷಯರೋಗ ಪ್ರಮಾಣವನ್ನು ರೂ. 1 ಲಕ್ಷ ಜನಸಂಖ್ಯೆಗೆ 47 ಪ್ರಕರಣಗಳಷ್ಟು ಕಡಿಮೆ ಮಾಡುವುದು. ಕ್ಷಯದಿಂದ ಮರಣ ಪ್ರಮಾಣವನ್ನ ಶೇ.3.6 ಕಡಿಮೆ ಮಾಡುವ ಹಾಗೂ ಕ್ಷಯರೋಗದಿಂದ ರೋಗಿಯ ಕುಟುಂಬಕ್ಕೆ ಆಗುವ ಆರ್ಥಿಕ ವೆಚ್ಚ ಶೂನ್ಯ ಮಾಡುವ ಧ್ಯೇಯ, ಗುರಿಗಳನ್ನು ಹೊಂದಲಾಗಿದೆ. ಸದ್ಯ ಭಾರತದಲ್ಲಿ ಪ್ರತಿವರ್ಷ 28.4 ಲಕ್ಷ ಜನ ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದು, 5 ಲಕ್ಷ ಜನ ಕ್ಷಯದಿಂದ ಮೃತರಾಗುತ್ತಿದ್ದಾರೆ ಎಂದು ಹೇಳಿದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಕ್ಷಯ ತಗಲುವ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿ ಆರೋಗ್ಯ ತಂಡಗಳು ಹೈ ರಿಸ್ಕ್ ಪ್ರದೇಶಗಳಿಗೆ ತೆರಳಿ, ಕ್ಷಯರೋಗದ ಬಗ್ಗೆ ಮಾಹಿತಿ ಮತ್ತು ಜನಜಾಗೃತಿ ಮೂಡಿಸುತ್ತದೆ. ಕ್ಷಯರೋಗ ಲಕ್ಷಣಗಳು ಕಂಡುಬಂದಲ್ಲಿ ಕಫ ಪರೀಕ್ಷೆ, ಅಥವಾ ಸಿಬಿ ನಾಟ್ ಪರೀಕ್ಷೆಯ ಮುಖಾಂತರ ಕ್ಷಯ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಬುದ್ಧನಗರ ನಗರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಂದ್ರ, ಸಹಾಯಕ ಜೈಲರ್ ಬಿ.ಆರ್.ಚಲವಾದಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಮೇಲ್ವಿಚಾರಕರಾದ ನಾಗರಾಜ್, ಸಂತೋಷ, ಲೋಕೇಶ್, ನಿಂಗೇಶ್, ರಮೇಶ್, ಕಾರಾಗೃಹ ನಿವಾಸಿಗಳು ಇದ್ದರು.
Kshetra Samachara
20/12/2024 04:40 pm