ರಾಯಪುರ: ಅಮ್ಮ ಎಂದರೆ ಅಗಾಧ ಶಕ್ತಿ. ತಾಯಿಯ ಬಾಂಧವ್ಯದ ಮುಂದೆ ಬೇರೆ ಸಾಟಿಯೇ ಇಲ್ಲ. ಅಮ್ಮ ತನ್ನ ಮಕ್ಕಳ ಒಳಿತಿಗಾಗಿ ಎಂಥ ಮಹಾತ್ಯಾಗಕ್ಕೂ ಸಿದ್ಧವಿರುತ್ತಾಳೆ. ಇಂತಹ ಸೂಕ್ಷ್ಮ ಸಂವೇದನೆ ಪ್ರಾಣಿಗಳಲ್ಲೂ ಇರುತ್ತೆ ಎಂಬುದಕ್ಕೆ ತಾಜಾ ಮತ್ತು ಉತ್ತಮ ಉದಾಹರಣೆ ಇಲ್ಲಿದೆ.
ಇದು ಛತ್ತೀಸ್‌ಗಡದ ರಾಯಘಡ ನಗರದಲ್ಲಿ ನಡೆದ ಘಟನೆ. ರಸ್ತೆಯಲ್ಲಿ ಮಲಗಿದ್ದ ಕರುವೊಂದು ಕಾರಿನ ಕೆಳಗೆ ಸಿಲುಕಿದೆ. ಇದನ್ನು ನಿರ್ಲಕ್ಷಿಸಿದ ಚಾಲಕ ಕಾರನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಹೀಗೆ ಕರುವನ್ನು 200 ಮೀಟರ್‌ವರೆಗೆ ಕಾರು ಎಳೆದೊಯ್ದಿದೆ. ಕೂಡಲೇ ಕಾರನ್ನು ಬೆನ್ನಟ್ಟಿದ ಇತರ ಹಸುಗಳು ಕಾರಿಗೆ ಅಡ್ಡಲಾಗಿ ನಿಂತಿವೆ. ಆ ಕಡೆ ಈ ಕಡೆ ತಡಕಾಡಿ ತನ್ನ ಕಂದಮ್ಮನಿಗಾಗಿ ಹುಡುಕಾಡಿವೆ. ನಂತರ ಕಾರನ್ನು ಸುತ್ತುವರೆದಿದೆ. ಈ ಅಚ್ಚರಿಯ ಸಂಗತಿ ಕಂಡು ಸ್ಥಳೀಯರು ಹತ್ತಿರ ಬಂದು ನೋಡಿದಾಗ ಕಾರಿನ ಕೆಳಗೆ ಕರು ಸಿಲುಕಿರುವುದು ಗೊತ್ತಾಗಿದೆ. ಕೂಡಲೇ ಕಾರನ್ನು ಮೇಲೆತ್ತಿದ ಸ್ಥಳೀಯರು ಕರುವನ್ನು ರಕ್ಷಿಸಿದ್ದಾರೆ.
ಆಗ ಕೃತಜ್ಞತಾ ಭಾವದಿಂದ ಸಾರ್ವಜನಿಕರತ್ತ ನೋಡಿದ ಹಸುಗಳು ತನ್ನ ಕರುವಿನೊಂದಿಗೆ ಅಲ್ಲಿಂದ ಬೇರೆಡೆ ಸಾಗಿವೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಮಾತೃಗುಣದ ಮೌಲ್ಯ, ಮಾನವೀಯ ಅಂತಃಕರಣ ನಡೆತೆ ಮನುಷ್ಯರಲ್ಲಿ ಕ್ಷೀಣಿಸಿದರೂ ಪ್ರಾಣಿಗಳಲ್ಲಿ ಇಂತಹ ಸೂಕ್ಷ್ಮ ಸಂವೇದನೆ ಜೀವಂತ ಇರುವುದನ್ನು ಕಂಡು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಹಸು ಮತ್ತು ಕರುವಿನ ನಡುವಿನ ಬಾಂಧವ್ಯ ಮತ್ತು ಕರಳು ಸಂಕಟ ಇಲ್ಲಿ ಢಾಳಾಗಿ ಕಾಣುತ್ತಿದೆ.
PublicNext
22/12/2024 04:47 pm