ಮಂಗಳೂರು: ಶ್ರೀ ಮಹಾಲಸಾ ನಾರಾಯಣಿ ಲಕ್ಷ್ಮೀ ವೆಂಕಟೇಶ ದೇವರಿಗೆ ಸಂಬಂಧಿಸಿದ ಮಂಗಳೂರು ಬಂದರಿನ ಕಸಬಾ ಬಜಾರ್‌ನಲ್ಲಿರುವ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಸ್ವಾಧೀನ ಪಡಿಸಿಕೊಂಡ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸಾಮಾಜಿಕ ಕಾರ್ಯಕರ್ತ ಪಡುಬಿದ್ರೆ ದಾಮೋದರ ಶೆಣೈ ಮಾತನಾಡಿ, ಸರ್ವೆ ನಂಬರ್ 1448-439/11-8 ಮತ್ತು ಆಸ್ತಿಯನ್ನು 1449-440/11-8 ನಲ್ಲಿರುವ ದೇವರಿಗೆ ಸಂಬಂಧಿಸಿದ ಭೂಮಿ ಲೀಸ್ ಗೆ ಪಡೆದಿರುವ ಭೂಮಿ. ಆದ್ದರಿಂದ ಈ ಭೂಮಿಯನ್ನು ಸ್ವಂತಕ್ಕೆ ಮಾಡುವ ಅವಕಾಶ ಯಾರಿಗೂ ಇಲ್ಲ. ಮಂಗಳೂರಿನ ಹೃದಯ ಭಾಗದಲ್ಲಿರುವ 8 ಸೆಂಟ್ಸ್ ಭೂಮಿಯನ್ನು 1932ರಲ್ಲಿ ಮಾರೂರು ಗಣಪತಿ ಅನಂತ ಪೈಯವರು ಶ್ರೀ ಮಹಾಲಸಾ ನಾರಾಯಣೀ ಲಕ್ಷ್ಮೀ ವೆಂಕಟೇಶ ದೇವರ ಭಂಡಾರಕ್ಕೆ ಶಾಶ್ವತ ಲೀಸಿಗೆ ಕೊಟ್ಟಿದ್ದರು.
ಗಣಪತಿ ಪೈ ಕಾಲಾನಂತರ ಹಿರಿಯ ಮಗ ರಾಮದಾಸ ಪೈ ಅವರಿಗೆ ಭೂಮಿ ಸ್ವಾಧೀನಕ್ಕೆ ಬಂದಿತ್ತು. ಅನಂತರ, ಅವರ ಪುತ್ರ ಮಾರೂರ್ ಗಣಪತಿ ಪೈ(2)ಯವರಿಗೆ ಹಕ್ಕು ಬಂದಿತ್ತು. ಆದರೆ, ಗಣಪತಿ ಪೈ(2)ಯವರ ಬಳಿಕ ಪತ್ನಿ ಗೀತಾ ಪೈ ಅಥವಾ ಮಕ್ಕಳಿಗೆ ನೀಡಲ್ಪಡುವ ಬದಲು ಭೂಮಿಯನ್ನು ಮಂಗಳೂರಿನ ಹಿರಿಯ ವಕೀಲ ಕೆ.ಪಿ. ವಾಸುದೇವ ರಾವ್ ಮತ್ತು ಕುಟುಂಬಕ್ಕೆ ಸೇರದ ಕೆಲವು ವ್ಯಕ್ತಿಗಳು ಸೇರಿಕೊಂಡು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ದೇವರಿಗೆ ಸೇರಿದ ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಂಡಿದ್ದಾರೆ. ಆರ್‌ಟಿಸಿ ದಾಖಲೆಯನ್ನು ಭೂಮಿ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ದೇವರಿಗೆ ಸೇರಿದ ಜಾಗ ಎಂಬುದಾಗಿದ್ದ ಉಲ್ಲೇಖವನ್ನು ತೆಗೆದು ಹಾಕಿರುವುದು ಪತ್ತೆಯಾಗಿದೆ. ಆ ಜಾಗದಲ್ಲಿ ಕಮಲಾ ಪಡಿಯಾರ್, ವಿಮಲಾ ಶೆಣೈ, ಮಂಗಲ್ಪಾಡಿ ಸಂಧ್ಯಾ ಶೆಣೈ ಮತ್ತು ಮಂಗಲ್ಪಾಡಿ ವರದರಾಯ ಶೆಣೈ (ಉಪೇಂದ್ರ ಟ್ರೇಡಿಂಗ್ ಕಂಪೆನಿ, ಪೋರ್ಟ್ ರೋಡ್ ಮಂಗಳೂರು) ಎಂಬವರ ಹೆಸರನ್ನು ಅಕ್ರಮವಾಗಿ ಸೇರ್ಪಡೆ ಮಾಡಲಾಗಿದೆ. ಇದೇ ದಾಖಲೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ನೀಡಲಾಗಿದೆ.
ದೇವರ ಹೆಸರಿನಲ್ಲಿ ಸೇರಿದ ಆಸ್ತಿಯನ್ನು ಖಾಸಗಿಯವರು ಅಕ್ರಮವಾಗಿ ಪರಭಾರೆ ಮಾಡಿಕೊಂಡಿರುವ ಬಗ್ಗೆ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಉಪ ಲೋಕಾಯುಕ್ತ ಜಸ್ಟಿಸ್ ವೀರಪ್ಪರಿಗೆ ದೂರು ನೀಡಿದ್ದು, ಅವರು ಪೊಲೀಸರಿಗೆ ದೂರು ನೀಡಲು ಸೂಚಿಸಿದ್ದರು. ಅದರಂತೆ, ಡಿ.1ರಂದು ಬಂದರು ಠಾಣೆಗೆ ದಾಖಲೆ ಸಹಿತ ದೂರು ನೀಡಿದ್ದರೂ, ಆರೋಪಿತರ ವಿರುದ್ಧ ಇಷ್ಟರವರೆಗೆ ಎಫ್‌ಐಆರ್ ದಾಖಲು ಮಾಡಿಲ್ಲ. ದೇವರ ಆಸ್ತಿಯನ್ನು ನುಂಗಿ ಹಾಕಿದವರ ಮೇಲೆ ಕ್ರಮ ಜರುಗಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದೇನೆ ಎಂದು ಪಡುಬಿದ್ರೆ ದಾಮೋದರ ಶೆಣೈ ಆಗ್ರಹಿಸಿದರು.
PublicNext
20/12/2024 03:59 pm