ಕುಂದಾಪುರ: ಇಪ್ಪತ್ತೈದು ಕೋಟಿ ಮೌಲ್ಯದ ಆಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಇದೆ ಎನ್ನುವ ಮಾಹಿತಿ ಪಡೆದ ಮಂಗಳೂರು ವಲಯ ಅರಣ್ಯ ಸಂಚಾರಿ ದಳ ಸಾರ್ವಜನಿಕರ ಕೈಯಿಂದ ಗಂಭೀರ ಹಲ್ಲೆಗೊಳಗಾಗಿ ಹಿಂತಿರುಗಿದ ಘಟನೆ ಬುಧವಾರ ಸಂಜೆ ಕುಂದಾಪುರ ತಾಲೂಕಿನ ಎಂ ಕೋಡಿ ಎಂಬಲ್ಲಿ ನಡೆದಿದೆ.
ಕಪ್ಪು ಮಾರುಕಟ್ಟೆಯಲ್ಲಿ ಆಂಬರ್ ಗ್ರೀಸ್ ಅಥವಾ ತಿಮಿಂಗಿಲ ವಾಂತಿ ಎಂದು ಕರೆಯಲ್ಪಡುವ ತಿಮಿಂಗಿಲದ ಎಂಜಲಿಗೆ ಕೆಜಿಗೆ ಒಂದು ಕೋಟಿ ಬೆಲೆ ಇದೆ ಎನ್ನಲಾಗಿದ್ದು, ಸುಮಾರು 25 ಕೆಜಿಯಷ್ಟು ಈ ಆಂಬರ್ ಗ್ರೀಸ್ ಎಂ.ಕೋಡಿಯ ನಿವಾಸಿಯೊಬ್ಬರ ಬಳಿ ಇದೆ ಎನ್ನುವ ಮಾಹಿತಿ ಆಧರಿಸಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಜಾನಕಿ ಎಂಬುವರ ನೇತೃತ್ವದಲ್ಲಿ ಎರಡು ವಾಹನಗಳಲ್ಲಿ ಮಫ್ತಿಯಲ್ಲಿ ಬಂದಿದ್ದ ಏಳು ಜನರ ತಂಡ ಎಂ ಕೋಡಿ ಸಮೀಪ ಇರುವ ಸೌಹಾರ್ದ ಭವನ ಸಮೀಪದ ಮನೆಯೊಂದಕ್ಕೆ ದಾಳಿ ನಡೆಸಿತ್ತು.
ಅರಣ್ಯ ಸಿಬ್ಬಂದಿ ಮಫ್ತಿಯಲ್ಲಿದ್ದುದರಿಂದ ಯಾವುದೋ ಕ್ರಿಮಿನಲ್ ಗಳ ತಂಡ ದರೋಡೆಗೆ ಯತ್ನಿಸುತ್ತಿದೆ ಎಂದು ಭಾವಿಸಿದ ಸ್ಥಳೀಯರು ಎಸ್ಸೈ ಜಾನಕಿ ಸಹಿತ ಏಳೂ ಜನರ ಮೇಲೆ ಗಂಭೀರ ಹಲ್ಲೆ ನಡೆಸಿದೆ. ಈ ಸಂದರ್ಭ ಎಸ್ಸೈ ಪಿಸ್ತೂಲು ತೋರಿಸಿದ್ದು, ಅಲ್ಲಿ ಸೇರಿದ್ದವರ ಪೈಕಿ ಒಬ್ಬ ಪಿಸ್ತೂಲನ್ನು ಕಿತ್ತುಕೊಂಡು ಬಳಿಕ ಹಿಂತಿರುಗಿಸಿದ್ದಾನೆ ಎಂದು ತಿಳಿದು ಬಂದಿದೆ.
ಗಾಯಗೊಂಡಿದ್ದ ಪೊಲೀಸರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಎಸ್ಸೈ ಜಾನಕಿ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೋಡಿ ನಿವಾಸಿ ಅಬೂಬಕ್ಕರ್ ಸಹಿತ ಎಂಟು ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಮಾಹಿತಿ ಪ್ರಕಾರ, ಐವರು ಪೊಲೀಸರ ಜೊತೆಗೆ ಇಬ್ಬರು ಮಾಹಿತಿದಾರರು ಇದ್ದರು. ಈ ಮಾಹಿತಿದಾರರು ಆಂಬರ್ ಗ್ರೀಸ್ ಖರೀದಿಸುವ ನೆಪದಲ್ಲಿ ಎಂ ಕೋಡಿಗೆ ಬಂದಿದ್ದರು. ಡೀಲ್ ಮಾಡಿಕೊಂಡು ಆಂಬರ್ ಗ್ರೀಸ್ ಇರುವುದನ್ನು ಖಚಿತಪಡಿಸಿಕೊಂಡ ತಕ್ಷಣ ಮಾಹಿತಿದಾರರು ಸಮೀಪದಲ್ಲಿ ವಾಹನದೊಳಗೆ ಕುಳಿತಿದ್ದ ಅರಣ್ಯ ಸಂಚಾರಿ ಪೊಲಿಸರಿಗೆ ಮಾಹಿತಿ ರವಾನಿಸಿದ್ದಾರೆ. ಅರಣ್ಯ ಸಂಚಾರಿ ಪೊಲೀಸರು ಆಗಮಿಸುತ್ತಿದ್ದಂತೆ ಮನೆಯಲ್ಲಿದ್ದ ಯುವಕ ಪರಾರಿಯಾಗಿದ್ದು, ಆತನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಹೊರಡುತ್ತಿದ್ದ ವೇಳೆ ಮಹಿಳೆಯರು ಕೂಗಿಕೊಂಡಿದ್ದಾರೆ. ಪಕ್ಕದಲ್ಲಿಯೇ ಕಾರ್ಯಕ್ರಮವೊಂದು ನಡೆಯುತ್ತಿದ್ದು, ಮಾಹಿತಿ ಪಡೆದ ಸ್ಥಳೀಯರು ಖರೀದಿದಾರರ ವೇಷದಲ್ಲಿದ್ದ ಮಾಹಿತಿದಾರರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾಹಿತಿದಾರರಿಗೆ ಹೊಡೆದ ಮಾಹಿತಿ ಸಿಕ್ಕಿದ ಅರಣ್ಯ ಸಂಚಾರಿ ಪೊಲೀಸರು ವಾಪಸ್ ಬಂದಾಗ ಹಲ್ಲೆ ನಡೆಯುತ್ತಿದ್ದುದನ್ನು ನೋಡಿ ಪಿಸ್ತೂಲು ತೋರಿಸಿದ್ದಾರೆ. ಆಗ ಉದ್ರೇಕಗೊಂಡ ಜನ, ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಸ್ಥಳೀಯರೊಬ್ಬರು ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಡಿವೈಎಸ್ಪಿ ಬೆಳ್ಳಿಯಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಅರಣ್ಯ ಸಂಚಾರಿ ಪೊಲೀಸರು ದಾಳಿ ವೇಳೆ ಸ್ಥಳೀಯ ಪೊಲೀಸರ ಗಮನಕ್ಕೆ ತಂದಿರಲಿಲ್ಲ ಎನ್ನಲಾಗಿದೆ.
ಮಫ್ತಿಯಲ್ಲಿದ್ದ ಪೊಲೀಸರನ್ನು ಸ್ಥಳೀಯರು ಕಳ್ಳರು ಎಂದು ಭಾವಿಸಿದ್ದೇ ಹಲ್ಲೆಗೆ ಕಾರಣ ಎಂದು ಸ್ಥಳೀಯರು ಹೇಳಿದರೆ ಮಾಹಿತಿ ಇದ್ದೇ ವ್ಯವಸ್ಥಿತ ದಾಳಿ ನಡೆಸಲಾಗಿದೆ ಎಂದು ಅರಣ್ಯ ಸಂಚಾರಿ ಪೊಲೀಸರು ಆರೋಪಿಸಿದ್ದಾರೆ.
Kshetra Samachara
19/12/2024 05:03 pm