ಕುಂದಗೋಳ : ಕುಂದಗೋಳ ಪಟ್ಟಣದ 19 ವಾರ್ಡ್'ಗಳ ಮನೆ-ಮನೆ ಕಸ, ಮಾರ್ಕೆಟ್, ಸಂತೆಯಲ್ಲಿ ಸಂಗ್ರಹಿಸಿ ಗುಡ್ಡೆ ಹಾಕಿದ ತ್ಯಾಜ್ಯದ ಬಯೋ ಮೈನಿಂಗ್ ಕಾರ್ಯ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಆರಂಭಗೊಂಡಿದೆ.
ಹೌದು ! ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ಇತ್ತೀಚೆಗೆ ಭೇಟಿ ಕೊಟ್ಟ ಪಬ್ಲಿಕ್ ನೆಕ್ಸ್ಟ್ "ಊರಲ್ಲಿನ ಕಸ ಊರ ಹೊರಗೆ ವಿಷ' ಅಧಿಕಾರಿಗಳು ಗಪ್ ಚುಪ್" ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಬಿತ್ತರಿಸಿತ್ತು.
ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಶೀಘ್ರವೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಸ ನಿರ್ವಹಣೆ ಬಯೋ ಮೈನಿಂಗ್ ಕಾರ್ಯ ಆರಂಭಿಸುವ ಭರವಸೆ ನೀಡಿ, ಇದೀಗ ಆ ಕೆಲಸವನ್ನು ಕಾರ್ಯಗತ ಮಾಡಿದ್ದಾರೆ.
ಸದ್ಯ ಕುಂದಗೋಳ ಕಡಪಟ್ಟಿ ಮಾರ್ಗ ಮಧ್ಯಲ್ಲಿರುವ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಒಂದು ಜೆಸಿಬಿ ಮತ್ತು ಬಯೋ ಮೈನಿಂಗ್ ಯಂತ್ರದ ಕಸ ಕರಗಿಸುವ ಕಾರ್ಯ ನಡೆದಿದ್ದು, ಪ್ಲಾಸ್ಟಿಕ್,ಮಣ್ಣು, ಘನ ತ್ಯಾಜ್ಯ ಮೂರು ವಿಭಾಗದಲ್ಲಿ ವಿಂಗಡಣೆ ಆಗುತ್ತಿದೆ.
ನಿತ್ಯ ಕುಂದಗೋಳ ಪಟ್ಟಣ ಪಂಚಾಯಿತಿ ಡಿಪಿಆರ್ ಪ್ರಕಾರ 6.50 ಟನ್ ಕಸ ಸಂಗ್ರಹ ಮಾಡುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಬೃಹತ್ ಕಸದ ಬೆಟ್ಟವನ್ನೇ ಸೃಷ್ಟಿ ಮಾಡಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದೀಗ ಆ ಬೆಟ್ಟವನ್ನು ಕರಗಿಸುವ ಕಾರ್ಯಕ್ಕೆ ಅಣಿಯಾಗಿದ್ದಾರೆ.
ಸದ್ಯ ಕಸ ಕರಗಿಸುವ ಕಾರ್ಯ ಎಷ್ಟು ದಿನ ನಡೆಯಲಿದೆ ? ಅದರ ನಿರ್ವಹಣೆ ಎಷ್ಟಾಗಲಿದೆ ? ಕರಗಿಸಿದ ಕಸವನ್ನು ಅಧಿಕಾರಿಗಳು ಏನು ಮಾಡುತ್ತಾರೆ ಎಂಬುದರ ಅಪ್ಡೇಟ್ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಲಿದೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್, ಶ್ರೀಧರ ಪೂಜಾರ, ಕುಂದಗೋಳ
Kshetra Samachara
19/12/2024 04:35 pm