ಕುಶಾಲನಗರ: ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಏಕೈಕ ಉದ್ದೇಶವಾಗಿದೆ. ಕೊಡಗು ವಿಶ್ವವಿದ್ಯಾಲಯದ ಘಟಕ ಮಹಾವಿದ್ಯಾಲಯ ಮತ್ತು ಸಂಯೋಜಿತ ಮಹಾವಿದ್ಯಾಲಯಗಳ ಎಲ್ಲಾ ಅಧ್ಯಾಪಕರುಗಳಿಗೆ ಅತ್ಯುನ್ನತ ಗುಣಮಟ್ಟದ ಜ್ಞಾನ ಮತ್ತು ತರಬೇತಿ ನೀಡುವ ಸಲುವಾಗಿ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ತಿಳಿಸಿದರು.
ಕೊಡಗು ಫ್ಯಾಕಲ್ಟಿ ಡೆವಲಪ್ಮೆಂಟ್ ಅಕಾಡೆಮಿ (ಕೆಎಫ್‌ಡಿಎ) ಕೊಡಗು ವಿಶ್ವವಿದ್ಯಾಲಯ, ಕೊಡಗು ರೀಚ್‌ಮಚ್ ಹೈಯರ್ ಅಕಾಡೆಮಿಕ್ಸ್ ಫೌಂಡೇಶನ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಕರು, ಸಂಶೋಧಕರು ಮತ್ತು ಮುಖ್ಯವಾಗಿ ಬ್ರ್ಯಾಂಡ್ ರಾಯಭಾರಿಗಳನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಈ ತರಬೇತಿ ಹೊಂದಿದೆ. ಶಿಕ್ಷಣಶಾಸ್ತ್ರ ಮತ್ತು ಸಂಶೋಧನಾ ವಿಧಾನಗಳಲ್ಲಿ ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ ಹೆಚ್ಚಿಸುವ ಸಲುವಾಗಿ ಈ ಐದು ದಿನಗಳ ಅವಧಿಯಲ್ಲಿ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ತರಬೇತಿ ಪಡೆದಂತಹ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಪಠ್ಯ ಚಟುವಟಿಕೆಗಳ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣ ಮೌಲ್ಯಗಳನ್ನು ತಿಳಿಯಪಡಿಸುವ ಮೂಲಕ ಉದ್ಯೋಗಾವಕಾಶಗಳನ್ನು ಪಡೆಯುವುದಕ್ಕೆ ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಈ ಕೋರ್ಸ್‌ನ್ನು ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಕಾರಗೊಳಿಸುವಂತೆ ಕರೆ ನೀಡಿದರು.
Kshetra Samachara
19/12/2024 09:55 am