ನಾಪೋಕ್ಲು: ವಿದ್ಯಾರ್ಥಿ ಜೀವನದಲ್ಲಿ ಎಸ್ ಎಸ್ ಎಲ್ ಸಿ ಪ್ರಮುಖ ಘಟ್ಟವಾಗಿದ್ದು ಯಶಸ್ಸಿನ ಮೆಟ್ಟಿಲನ್ನು ಏರಲು ವಿದ್ಯಾರ್ಥಿಗಳು ಸತತವಾಗಿ ಶ್ರಮವಹಿಸಬೇಕು ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ ಅನಂತಶಯನ ಹೇಳಿದರು. ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪರೀಕ್ಷಾ ಸಿದ್ಧತೆ ಪ್ರೇರಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜೀವನದಲ್ಲಿ ಅಸಾಧ್ಯವಾದುದು ಏನೂ ಇಲ್ಲ .ಗುರು ನಿಮ್ಮ ಭವಿಷ್ಯವನ್ನು ರೂಪಿಸುತ್ತಾರೆ. ಅದಕ್ಕೆ ಗುರುವಿಗೆ ದೇವರ ಸ್ಥಾನವನ್ನು ಕಲ್ಪಿಸಲಾಗಿದೆ ಎಂದರು. ಭವಿಷ್ಯವನ್ನು ರೂಪಿಸಲು ಅಧಿಕ ತಯಾರಿ ನಡೆಸಬೇಕಾಗುತ್ತದೆ. ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಸಮಾಜವನ್ನು ಬೆಳೆಸುವ, ಕಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದ ಅವರು ತಯಾರಿಗೆ ಸಮಯ ವ್ಯರ್ಥ ಮಾಡದೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
Kshetra Samachara
23/12/2024 09:36 pm