ಮಡಿಕೇರಿ: ಮಕ್ಕಳಿಗೆ ಮಾನವೀಯ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಅವರು ಪ್ರತಿಪಾದಿಸಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಆರ್‍ಟಿಇ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಬಗ್ಗೆ ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ‘ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ’ ಕುರಿತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳ ಜೀವನದ ಪರಿಪೂರ್ಣ ಬೆಳವಣಿಗೆಗೆ ಮೌಲ್ಯಯುತ ಶಿಕ್ಷಣ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ವೆಂಕಟೇಶ್ ಅವರು ಸಲಹೆ ಮಾಡಿದರು.
ಮಕ್ಕಳ ಹಕ್ಕುಗಳ ಕುರಿತು ಸಾಕಷ್ಟು ಕಾನೂನುಗಳು, ಕಾಯ್ದೆಗಳು ಇದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ, ದೌರ್ಜನ್ಯಗಳು ನಡೆಯುತ್ತಿದ್ದು, ಇದನ್ನು ತಡೆಯಬೇಕು ಎಂದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನಿಗಾವಹಿಸಬೇಕು. ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಪ್ಪಿಸಲು ಹತ್ತಿರದಲ್ಲಿಯೇ ಶಾಲಾ ಕಾಲೇಜುಗಳು ಇರಬೇಕು. ಇಲ್ಲದಿದ್ದಲ್ಲಿ ಸಾರಿಗೆ ಸಂಪರ್ಕವಾದರೂ ಸಮಪರ್ಕವಾಗಿರಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಾರಿಗೆ ಸಂಪರ್ಕ ಇಲ್ಲದೆ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ಇಂದಿಗೂ ಸಹ ಕಾಣುತ್ತೇವೆ. ಕೆಲವು ಕಡೆಗಳಲ್ಲಿ ವಿದ್ಯಾರ್ಥಿ ನಿಲಯ ಸೇರಲು ಹಿಂಜರಿಕೆ ಪಡುತ್ತಾರೆ. ಆದ್ದರಿಂದ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಬಲಪಡಿಸಬೇಕು ಎಂದರು.
Kshetra Samachara
18/12/2024 04:02 pm