ಮಡಿಕೇರಿ: ಮಹಿಳೆಯರು ಎಂದರೆ ಶಕ್ತಿ ಸ್ವರೂಪ. ಆದರೆ ಇಂತಹ ಮಹಿಳೆಯರಿಗೆ ಹೆಚ್ಚಿನ ದೌರ್ಜನ್ಯವಾಗುತ್ತಿದೆ. ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೋ ಅಲ್ಲಿ ದೇವತೆಗಳು ಇರುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದರು.
ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಬಾಲಭವನದಲ್ಲಿ ನಡೆದ ಮಹಿಳೆಯರಿಗಾಗಿ ಕಾನೂನು ಅರಿವು ವಿಧಾನ ಸೆ ಸಮಾದಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದರೂ ಸಹ ಸಾಕಷ್ಟು ಅನ್ಯಾಯಗಳು ನಡೆಯುತ್ತಿವೆ. ಹಾಗೆಯೇ ಮಹಿಳೆಯರಿಗಾಗಿ ವಿಶೇಷ ಕಾನೂನು ಕಾರ್ಯಕ್ರಮಗಳಿವೆ. ಅದನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳೆಯರ ಹಕ್ಕುಗಳ ಬಗ್ಗೆ ಹೆಚ್ಚಿನ ಧ್ವನಿ ಎತ್ತಿದವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ಹೇಳಿದರು. ಮೊದಲು ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇಲ್ಲವೆಂಬ ಕಾನೂನು ಇತ್ತು. ಆದರೆ ಈಗ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆ ಎಂಬ ಕಾನೂನು ಸರ್ವೋಚ್ಚ ನ್ಯಾಯಾಲವು ಹೊರಡಿಸಿದೆ. ಇದೆಲ್ಲವೂ ಮಹಿಳೆಯರಿಗೆ ಸಮಾನತೆ ಹಕ್ಕು ಇದೆ ಎಂಬುದಾಗಿದೆ. ಮಹಿಳೆಯರು ಅನೇಕ ವಿಷಯಗಳಲ್ಲಿ ಬಲಿಯಾಗುತ್ತಿದ್ದಾರೆ. ಅಮಾನವೀಯವಾಗಿ ದೌರ್ಜನ್ಯಗಳು ನಡೆಯುತ್ತಿವೆ ಎಂದರು.
Kshetra Samachara
21/12/2024 11:23 am