ಮಂಗಳೂರು: ಗೋವಾದಿಂದ ಮಂಗಳೂರಿಗೆ ನಿಷೇಧಿತ ಮಾದಕದ್ರವ್ಯ ಕೋಕೇನ್ ಪೂರೈಸುತ್ತಿದ್ದ ನೈಜೀರಿಯಾ ದೇಶದ ಪ್ರಜೆಯನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆತನಿಂದ 30 ಗ್ರಾಂ ಕೋಕೆನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾ ದೇಶದ ಪ್ರಜೆ, ಸದ್ಯ ಗೋವಾದಲ್ಲಿ ವಾಸ್ತವ್ಯವಿರುವ ಮೈಕೆಲ್ ಒಕಾಫಾರ್ ಒಡಿಕ್ಪೊ(44) ಬಂಧಿತ ಆರೋಪಿ.
2024ರ ಮಾರ್ಚ್‌ನಲ್ಲಿ ಗೋವಾದಿಂದ ಕೋಕೆನ್ ಅನ್ನು ಖರೀದಿಸಿಕೊಂಡು ಬಂದು ಉಳ್ಳಾಲದ ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡುತ್ತಿದ್ದ ಅಂಬ್ಲಮೊಗರು ನಿವಾಸಿಗಳಾದ ಸದಕತ್ ಯು. ಹಾಗೂ ಮಹಮ್ಮದ್ ಅಶ್ಫಕ್ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದರು. ಈ ವೇಳೆ ಅವರಲ್ಲಿದ್ದ 34 ಗ್ರಾಂ ಕೋಕೆನ್ ಸೇರಿದಂತೆ 2,72,000ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಿಗೆ ಕೊಕೇನ್ ನೀಡಿದ ಗೋವಾದ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಗೋವಾ ರಾಜ್ಯದ ಉತ್ತರ ಗೋವಾದ ಕಾಲನ್ ಗೂಟ್ ಎಂಬಲ್ಲಿಗೆ ಆರೋಪಿ ಪತ್ತೆ ಬಗ್ಗೆ ಹೋಗಿ ನೈಜೇರಿಯಾ ದೇಶದ ಪ್ರಜೆಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 30 ಗ್ರಾಂ ಕೋಕೇನ್, ಸಾಗಾಟಕ್ಕೆ ಉಪಯೋಗಿಸಿದ ಬೊಲೆನೋ ಕಾರು, 2 ಮೊಬೈಲ್ ಫೋನ್‌ಗಳು, 4500ರೂ ಹಣ, ಡಿಜಿಟಲ್ ತೂಕ ಮಾಪನವನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 11,25,000ರೂ. ಆಗಿರುತ್ತದೆ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಸೆನ್ ಕ್ರೈಂ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈತನ ವಿರುದ್ದ ಈಗಾಗಲೇ ಗೋವಾದಲ್ಲಿ ಒಟ್ಟು 3 ಮಾದಕವಸ್ತು ಮಾರಾಟ ಪ್ರಕರಣ ದಾಖಲಾಗಿದೆ.
PublicNext
17/12/2024 10:50 pm