ದೊಡ್ಡಬಳ್ಳಾಪುರ : ನೂರಾರು ದಲಿತ ಕುಟುಂಬಗಳು ಹಬ್ಬಗಳಲ್ಲಿ ಪೂಜೆ ಮಾಡುತ್ತಿದ್ದ ಪೂಜ್ಯನೀಯ ಸ್ಥಳ, ದೇವಸ್ಥಾನದ ಜಾಗವನ್ನ ಒತ್ತುವರಿ ಮಾಡಿ ವಾಣಿಜ್ಯ ಮಳಿಗೆಗಳನ್ನ ನಿರ್ಮಾಣ ಮಾಡಿ ಬಾಡಿಗೆಗೆ ನೀಡಲಾಗಿದೆ. ದೇವಸ್ಥಾನದ ಜಾಗವನ್ನ ಸರ್ಕಾರದ ವಶಕ್ಕೆ ಪಡೆಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಬಿಇಓ ಆಫೀಸ್ ಪಕ್ಕದಲ್ಲಿರುವ ಸರ್ವೆ ನಂಬರ್ 92ರ 23 ಗುಂಟೆ ಜಾಗ ಈ ಹಿಂದೆ ಹೂವಿನ ತೋಟವಾಗಿತ್ತು. ಈ ಸ್ಥಳದಲ್ಲಿ ಮುನೇಶ್ವರ ದೇವಾಲಯ ಇದ್ದು, ಸುತ್ತಮುತ್ತಲಿನ ಜನರು ಇಲ್ಲಿಗೆ ಬಂದು ಮಕ್ಕಳಿಗೆ ಮುಡಿ ಹಾಗೂ ಯುಗಾದಿ ಹಬ್ಬದ ದಿನ ವಿಶೇಷ ಪೂಜೆಯನ್ನ ಮಾಡುತ್ತಿದ್ದರು. ಕಛೇರಿಪಾಳ್ಯದಲ್ಲಿರುವ ನೂರಾರು ದಲಿತ ಕುಟುಂಬಗಳಿಗೆ ಈ ಜಾಗ ಪೂಜ್ಯನಿಯ ಸ್ಥಳ, ಸಮುದಾಯಕ್ಕೆ ಸೇರಿದ ಸಂಘವೊಂದು ಈ ಜಾಗವನ್ನ ಒತ್ತುವರಿ ಮಾಡಿಕೊಂಡಿದೆ. ಅನಧಿಕೃತವಾಗಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡಿ ಕಟ್ಟಡವನ್ನ ಬಾಡಿಗೆ ನೀಡಿ ವಾಣಿಜ್ಯವಾಗಿ ಲಾಭ ಪಡೆಯುತ್ತಿದೆ. ದೇವಸ್ಥಾನದ ಜಾಗದ ರಕ್ಷಣೆಗಾಗಿ ದಲಿತ ಕುಟುಂಬಗಳು ಮುಂದಾಗಿದ್ದು, ಸರ್ಕಾರಿ ಜಾಗವನ್ನ ವಶಕ್ಕೆ ಪಡೆದು ಮುನೇಶ್ವರ ದೇವಾಲಯದ ಹೆಸರಿಗೆ ಖಾತೆ ಮಾಡಿಸಿ, ಮುಜರಾಯಿ ಇಲಾಖೆ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸ್ಥಳೀಯರಾದ ಗಜೇಂದ್ರ, ದೇವಸ್ಥಾನದ ಜಾಗವನ್ನ ಒತ್ತುವರಿ ಮಾಡಿ, ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಿ ನಾವು ಒಳಗೆ ಬರದಂತೆ ತಡೆಯುತ್ತಿದ್ದಾರೆ. ಒತ್ತುವರಿಯಾಗಿರುವ ಜಾಗವನ್ನ ತೆರವು ಮಾಡಿ ನಮ್ಮ ಮಕ್ಕಳಿಗೆ ಪೂಜೆ ಮಾಡುವ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
Kshetra Samachara
17/12/2024 01:02 pm