ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎರಡು ತಿಂಗಳ ಹಿಂದೆ ಖರೀದಿಸಿದ್ರು ಹೊಸ ಕಾರು - ಇಂದು ಯಮರೂಪಿ ಟ್ರಕ್ ಬಿದ್ದು ಇಡೀ ಕುಟುಂಬ ಸಾವು

ಬೆಂಗಳೂರು: ವಿಧಿಯಾಟ ಬಲ್ಲವರು ಯಾರು? ವೀಕೆಂಡ್ ಅಂತಾ ವಾರದ ಕೊನೆಯಲ್ಲಿ ಇಡೀ ಕುಟುಂಬ ಊರಿಗೆ ಹೊರಟಿತ್ತು. ಆದ್ರೆ ಹೆದ್ದಾರಿಯಲ್ಲಿ ಕಂಟೈನರ್ ರೂಪದಲ್ಲಿ ಬಂದ ಜವರಾಯ ಒಂದೇ ಕುಟುಂಬದ ಆರು ಮಂದಿಯನ್ನ ಬಲಿ ಪಡೆದಿದ್ದಾನೆ.

ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿ ಭೀಕರ ಅಪಘಾತ ದಕ್ಕೆ ಸಾಕ್ಷಿಯಾಗಿದೆ. ಮನೆ ಮಂದಿಯೆಲ್ಲ ಊರಿಗೆ ಹೊರಟಿದ್ದ ವೇಳೆ, ಕಂಟೈನರ್ ರೂಪದಲ್ಲಿ ಬಂದ ಜವರಾಯ ಇಡೀ ಕುಟುಂಬವನ್ನ ಬಲಿ ಪಡೆದಿದ್ದಾನೆ. ತುಮಕೂರು ರಸ್ತೆಯ ಡಾಬಸ್ ಪೇಟೆ ಬಳಿ ಈ ಭೀಕರ ಅಪಘಾತವಾಗಿದ್ದು, ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಹೀಗೆ ಭೀಕರ ಅಪಘಾತಕ್ಕೆ ಬಲಿಯಾದವರು ಇವರೇ, ಹೆಸರು 48 ವರ್ಷದ ಚಂದ್ರಮ್ ಯಗಪ್ಪಗೋಲ್, 42 ವರ್ಷದ ಗೌರಿಬಾಯಿ, 36 ವರ್ಷದ ವಿಜಯಲಕ್ಷ್ಮೀ, 16 ವರ್ಷದ ಗ್ಯಾನ್, 12 ವರ್ಷದ ದೀಕ್ಷಾ ಮತ್ತು ಆರು ವರ್ಷದ ಆರ್ಯ ಸಾವನ್ನಪ್ಪಿದ ದುರ್ದೈವಿಗಳು. ಕಳೆದ ಎರಡು ತಿಂಗಳ ಹಿಂದಷ್ಟೇ ವೋಲ್ವೋ ಕಂಪನಿ ಕಾರು ಖರೀದಿ ಮಾಡಿ ಇಡೀ ಕುಟುಂಬ ಸಂಭ್ರಮಿಸಿತ್ತು.

ಇಂದು ಅದೇ ಕಾರಿನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಚಂದ್ರಮ್ ಅವರು ತಮ್ಮ ಕುಟುಂಬ ಸಮೇತ ವೋಲ್ವೊ ಕಾರಿನಲ್ಲಿ ವಿಜಯಪುರ ಕಡೆ ಹೊರಟಿದ್ದರು. ಡಾಬಸ್ ಪೇಟೆಯ ತಾಳೇಕೆರೆ ಸಮೀಪ ಹೋಗುತ್ತಿದ್ದಾಗ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯೊಂದು ರಸ್ತೆ ಮಧ್ಯದ ವಿಭಜಕ ಕ್ರಾಸ್ ಮಾಡಿ ತುಮಕೂರು ಮಾರ್ಗದ ರಸ್ತೆಗೆ ನುಗ್ಗಿದೆ. ಈ ವೇಳೆ ಕ್ಯಾಂಟರ್ ವೊಂದಕ್ಕೆ ಕಂಟೈನರ್ ಡಿಕ್ಕಿ ಹೊಡೆದಿದ್ದು, ಕ್ಯಾಂಟರ್ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಈ ವೇಳೆ ಕ್ಯಾಂಟರ್ ಹಿಂದೆ ಬರುತ್ತಿದ್ದ ವೋಲ್ವೊ ಕಾರಿನ ಮೇಲೆ ಕಂಟೈನರ್ ಲಾರಿ ಪಲ್ಟಿ ಹೊಡೆದು ಬಿದ್ದಿದೆ. ಕಂಟೈನರ್ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಭೀಕರ ಅಪಘಾತದ ವಿಚಾರ ತಿಳಿದ ನೆಲಮಂಗಲ ಸಂಚಾರ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಕಂಟೈನರ್ ತೆರವುಗೊಳಿಸಿ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಅಷ್ಟರಲ್ಲಿ ಕಾರಿನಲ್ಲಿದ್ದ ಇಬ್ಬರು ಪುರುಷರು, ಇಬ್ಬರು ಮಹಿಳೆಯರ ಹಾಗೂ ಮಕ್ಕಳ ಪ್ರಾಣಪಕ್ಷಿ ಹಾರಿ ಹೋಗಿತ್ತು. ಘಟನೆ ಸಂಬಂಧ ಸ್ಥಳಕ್ಕೆ ಐಜಿಪಿ ಲಾಭೂರಾಮ್, ಎಸ್‌ಪಿಸಿಕೆ ಬಾಬಾ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ಇನ್ನೂ ಈ ರಣ ಭೀಕರ ಅಪಘಾತದಿಂದ ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿ ಹತ್ತು ಕಿಮೀ ವರೆಗೆ ಪುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇನ್ನು ಅಪಘಾತದಲ್ಲಿ ಮೃತಪಟ್ಟ ಚಂದ್ರಮ್ ಮತ್ತು ಕುಟುಂಬ ಮಹಾರಾಷ್ಟ್ರದ ಜತ್ ತಾಲ್ಲೂಕು ಮೂಲದವರಾಗಿದ್ದು, ನಗರದ ಬೆಳ್ಳಂದೂರಿನಲ್ಲಿ ನೆಲೆಸಿದ್ದರು. ಮೃತ ಚಂದ್ರಮ್ ಯಗಪಗೋಳ್ ಹೆಚ್ಎಸ್ಆರ್ ಲೇಔಟ್ ನಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಹೆಸರಲ್ಲಿ ಕಂಪನಿ ನಡೆಸುತ್ತಿದ್ದರು. 2018ರಲ್ಲಿ ಕಂಪನಿ ತೆರೆದಿದ್ದು, ಆಟೋ ಮೊಬೈಲ್ ಇಂಡಸ್ಟ್ರಿಗೆ ಸಾಫ್ಟ್ ವೇರ್ ಡೆವಲಪ್ ಮಾಡುತ್ತಿದ್ದರು. ತನ್ನ ಕಂಪನಿಯಲ್ಲಿ ನೂರಕ್ಕು ಹೆಚ್ಚು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಕಂಪನಿಯನ್ನ ಇನ್ನಷ್ಟು ವಿಸ್ತರಿಸಲು ಯೋಜನೆ ಕೂಡ ರೂಪಿಸಿದ್ದರು. ಉದ್ಯೋಗಿಗಳ ಫ್ರೆಂಡ್ಲಿಯಾಗಿದ್ದ ಚಂದ್ರಮ್ ಅವರ ಸಾವು ಸಿಬ್ಬಂದಿಗೆ ದಿಗ್ಭ್ರಮೆ ಮೂಡಿಸಿದೆ.

ಇನ್ನು ವಿಪರ್ಯಾಸ ಅಂದ್ರೆ, ಎರಡು ತಿಂಗಳ ಹಿಂದಷ್ಟೆ ಒಂದು ಕೋಟಿಗು ಅಧಿಕ ಬೆಲೆಯ ಈ ಐಷಾರಾಮಿ ಕಾರು ಖರೀದಿಸಿ ತಮ್ಮ‌ ಕುಟುಂಬದವರ ಜೊತೆ ಸಂಭ್ರಮಿಸಿದ್ದರು. ಅದ್ರೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಅದೇ ಕಾರ್‌ನಲ್ಲಿ ಇಡೀ ಕುಟುಂಬದ ದಾರುಣ ಅಂತ್ಯ ಕಂಡಿದ್ದು, ದುರ್ದೈವದ ಸಂಗತಿ. ಸದ್ಯ ಈ ಬಗ್ಗೆ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Edited By : Vinayak Patil
PublicNext

PublicNext

21/12/2024 07:38 pm

Cinque Terre

34.58 K

Cinque Terre

8

ಸಂಬಂಧಿತ ಸುದ್ದಿ