ಗದಗ: ಕಳೆದ ಕೆಲ ವರ್ಷಗಳಿಂದ ಬಿಂಕದಕಟ್ಟಿ ಮೃಗಾಲಯದಲ್ಲಿ ಘರ್ಜಿಸಿದ್ದ ಅನುಸೂಯ ಎಂಬ 16 ವರ್ಷದ ಹೆಣ್ಣು ಹುಲಿ ಶನಿವಾರ ತಡರಾತ್ರಿ ಮೃತಪಟ್ಟಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ, ಅಸುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾಜುದ್ದೀನ್ ಓಲೇಕಾರ ಸಮ್ಮುಖದಲ್ಲಿ ಭಾನುವಾರ ಬೆಳಿಗ್ಗೆ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೃಗಾಲಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಹುಲಿಯನ್ನು ಕಳೆದ 8 ವರ್ಷಗಳ ಹಿಂದೆ ಮೈಸೂರು ಮೃಗಾಲಯದಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾಗಿತ್ತು. ಮೈಸೂರಿನಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ತರುವ ಸಂದರ್ಭದಲ್ಲಿ ಬೋನಿನ ಕಬ್ಬಿಣದ ಸರಳುಗಳನ್ನು ಕಚ್ಚಿದ್ದರಿಂದ ಹುಲಿಯ ಹಲ್ಲು, ದವಡೆಗೆ ಹಾನಿಯುಂಟಾಗಿತ್ತು.
ಚಿಕಿತ್ಸೆ ನೀಡಿದರೂ ಮಾಂಸ ಹಾಗೂ ಗಟ್ಟಿಯಾದ ಪದಾರ್ಥವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಂಡಿತ್ತು. ಇದರಿಂದ ಅಂದಿನಿಂದಲೂ ಆಹಾರ ಜಗಿಯುವ ಸಮಸ್ಯೆ ಎದುರಿಸುತ್ತಿತ್ತು. ಅಲ್ಲದೇ, ವಯಸ್ಸು ಕೂಡ ಆಗಿದ್ದರಿಂದ 16 ವರ್ಷದ ಹೆಣ್ಣು ಹುಲಿ ಅನುಸೂಯ ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿ ಸ್ನೇಹಾ ಪೂಜಾರ ಮಾಹಿತಿ ನೀಡಿದ್ದಾರೆ.
PublicNext
16/12/2024 10:41 am