ಕೊಡಗು: ಅತೀ ವೇಗದಿಂದ ಬಂದ ಸರ್ಕಾರಿ ಬಸ್ ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಮುಖ್ಯ ರಸ್ತೆಯಲ್ಲಿಯೇ ಮಗುಚಿಗೊಂಡ ಘಟನೆ ಕೊಡಗು ಜಿಲ್ಲೆ ತಿತಿಮತಿ - ಗೋಣಿಕೊಪ್ಪ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಬಸ್ ಮಗುಚಿಕೊಂಡ ಪರಿಣಾಮ ಚಾಲಕನ ಬಲಗಾಲು ಮೂಳೆ ಮುರಿದಿದೆ. ಬಸ್‌ನಲ್ಲಿದ್ದ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕ ಹುಣಸೂರು ಮೂಲದ ದೊರೇಶ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 8-35ರ ಸಮಯದಲ್ಲಿ ಈ ಘಟನೆ ನಡೆದಿದೆ. ದೇವರಪುರ ಬಳಿಯ ಇಳಿಜಾರಿನಲ್ಲಿ ವೇಗವಾಗಿ ಬಂದ ಬಸ್ ಗುಂಡಿಯನ್ನು ತಪ್ಪಿಸುವ ಸಂದರ್ಭ ನಿಯಂತ್ರಣ ತಪ್ಪಿ ಸಮೀಪದ ರಸ್ತೆ ಬದಿಯಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ರಸ್ತೆಯಲ್ಲಿಯೇ ಮಗುಚಿಕೊಂಡಿದೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಬಸ್‌ನ ಒಳಭಾಗದಲ್ಲಿ ಸಿಲುಕಿಕೊಂಡು ಹೊರ ಬರಲಾಗದೆ ಪರದಾಡಿದ್ದಾರೆ.
ಈ ವೇಳೆ ಇದೇ ಮಾರ್ಗವಾಗಿ ಬಂದ ನಾಗರಿಕರು ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು. ಚಾಲಕನ ಕಾಲು ಬಸ್‌ನ ಸ್ಟೇರಿಂಗ್‌ಗೆ ಸಿಲುಕಿಕೊಂಡ ಪರಿಣಾಮ ಮುರಿತಗೊಂಡಿದೆ. ಗಾಯಗೊಂಡವರನ್ನು ನಾಗರಿಕರು ರಕ್ಷಣೆ ಮಾಡಿ ಗೋಣಿಕೊಪ್ಪ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ಮೂಲಕ ಸಾಗಿಸಲು ಕೈ ಜೋಡಿಸಿದರು. ಗೋಣಿಕೊಪ್ಪ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗೋಣಿಕೊಪ್ಪ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಂಡರು.
PublicNext
10/12/2024 09:22 am